ತುಮಕೂರು : ಮಾಜಿ ಸಿಎಂ, ಬಿಜೆಪಿ ಕೇಂದ್ರ ಸಂಸದೀಯ ಮಂಡಳಿಯ ಸದಸ್ಯ ಯಡಿಯೂರಪ್ಪ ಬಿಜೆಪಿ ಪಕ್ಷದ ಪ್ರಶ್ನಾತೀತ ನಾಯಕರು. ನಾನಾಗಲಿ ಯಡಿಯೂರಪ್ಪನವರಾಗಲಿ ಪಕ್ಷಕ್ಕೆ ಅನಿವಾರ್ಯ ಅಲ್ಲ. ನಮ್ಮಲ್ಲಿ ವ್ಯಕ್ತಿಗಿಂತ ಪಕ್ಷ ಮುಖ್ಯ. ನಾವ್ಯಾರು ಪಕ್ಷಕ್ಕೆ ಅನಿವಾರ್ಯ ಅಲ್ಲ ಎಂದು ಮಾಜಿ ಸಚಿವ ವಿ ಸೋಮಣ್ಣ ಹೇಳಿದರು. ತಿಪಟೂರು ತಾಲೂಕಿನ ನೊಣವಿನಕೆರೆ ಕಾಡಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ನೊಣವಿನಕೆರೆ ಮಠದ ಭಕ್ತನಾಗಿದ್ದೇನೆ. ಅದಕ್ಕಾಗಿ ಇಲ್ಲಿಗೆ ಬಂದಿದ್ದೇನೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕೂಡ ಇಲ್ಲಿನ ಭಕ್ತರು. ಅವರೂ ಇಲ್ಲಿ ಬಂದು ಪೂಜೆ ಮಾಡುತ್ತಾರೆ. ನಾವು ಇಲ್ಲಿಗೆ ಭಕ್ತರಾಗಿ ಬರುತ್ತೇವೆಯೋ ಹೊರತು, ಇಲ್ಲಿ ಪಕ್ಷ ಇಲ್ಲ. ಅವರ ಭೇಟಿಗೂ ನನ್ನ ಭೇಟಿಗೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದರು.
ವಿಧಾನಸಭೆ ಚುನಾವಣೆ ಸೋಲಿನ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾನು ಚುನಾವಣೆಯಲ್ಲಿ ಸೋತಿದ್ದೇನೆ. ಕಾಂಗ್ರೆಸ್ ಪರ ಜನರು ತೀರ್ಪು ನೀಡಿದ್ದಾರೆ. ಜನರ ತೀರ್ಪನ್ನು ಒಪ್ಪುತ್ತೇನೆ ಎಂದರು. ಸೋಲಿಗೆ ಕಾರಣ ಏನೂ ಇಲ್ಲ. ಕಳೆದ ಬಾರಿಯ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸೋತಿತ್ತು. ಸಿಎಂ ಆಗಿದ್ದ ಸಿದ್ದರಾಮಯ್ಯ ಅವರು ಒಂದು ಕಡೆ ಸೋತಿದ್ದರು. ರಾಜಕೀಯದಲ್ಲಿ ಇದೆಲ್ಲಾ ನಡೆಯುತ್ತಾ ಇರುತ್ತದೆ ಎಂದು ಹೇಳಿದರು. ಯಡಿಯೂರಪ್ಪ ಅವರನ್ನು ಕೆಳಗಿಳಿಸಿದ್ದಕ್ಕೆ ಲಿಂಗಾಯತರು ಬಿಜೆಪಿಯನ್ನು ಸೋಲಿಸಿದರು ಎಂದು ಹೇಳುವುದು ಸರಿಯಲ್ಲ. ಲಿಂಗಾಯತರನ್ನೇ ಯಾಕೆ ಗುರಿಯಾಗಿಸಿ ಮಾತನಾಡ್ತೀರಾ. ಲಿಂಗಾಯತರು ಸ್ವತಂತ್ರವಾಗಿ ಬದುಕುವುದು ಬೇಡ್ವಾ ಎಂದು ಸೋಮಣ್ಣ ಮಾಧ್ಯಮದವರಿಗೆ ಪ್ರಶ್ನಿಸಿದರು.
ಚಾಮರಾಜನಗರ, ವರುಣಾದಲ್ಲಿ ವಿ. ಸೋಮಣ್ಣಗೆ ಸೋಲು : ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 135 ಸ್ಥಾನಗಳನ್ನು ಗೆಲ್ಲುವ ಮೂಲಕ ಪೂರ್ಣ ಬಹುಮತ ಪಡೆದಿದೆ. ಬಿಜೆಪಿ 65 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಸೋಲನ್ನು ಕಂಡಿದೆ. ಚಾಮರಾಜನಗರ ಹಾಗೂ ವರುಣಾ ಎರಡು ಕ್ಷೇತ್ರಗಳಿಂದ ಸ್ಪರ್ಧೆ ಮಾಡಿದ್ದ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಅವರು ಎರಡೂ ಕ್ಷೇತ್ರಗಳಲ್ಲೂ ಸೋಲನ್ನು ಅನುಭವಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಸಿ. ಪುಟ್ಟರಂಗ ಶೆಟ್ಟಿ ಚಾಮರಾಜನಗರದಲ್ಲಿ ಸತತ ನಾಲ್ಕನೇ ಬಾರಿಗೆ ಗೆದ್ದು ಬೀಗಿದ್ದಾರೆ.
ತೀವ್ರ ಕುತೂಹಲ ಕೆರಳಿಸಿದ್ದ ವರುಣಾ ಕ್ಷೇತ್ರದಲ್ಲೂ ಸೋಮಣ್ಣ ಸೋತಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸೋತಿದ್ದಾರೆ. ಸಿದ್ದರಾಮಯ್ಯ 1,19,816 ಮತಗಳನ್ನು ಪಡೆದರೆ, ಸೋಮಣ್ಣ 73653 ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ.
ನನ್ನ ಪುತ್ರನ ರಾಜಕೀಯ ಭವಿಷ್ಯ ರೂಪಿಸಬೇಕೆಂಬ ಆಸೆ ಇತ್ತು : ನನ್ನ ಮಗನನ್ನು ರಾಜಕೀಯಕ್ಕೆ ತರಬೇಕು ಎಂಬ ಆಸೆ ಇತ್ತು. ಅದಕ್ಕಾಗಿಯೇ ಈ ಬಾರಿ ನನಗೆ ಟಿಕೆಟ್ ಬೇಡ ನನ್ನ ಬದಲು ನನ್ನ ಮಗನಿಗೆ ಟಿಕೆಟ್ ಕೊಡಿ ಎಂದು ಹೇಳಿದ್ದೆ. ಆದರೆ, ಪಕ್ಷವು ನನಗೆ 2 ಕಡೆ ಟಿಕೆಟ್ ಕೊಟ್ಟರು. ನನ್ನ ಮಗ ವೈದ್ಯ, ಪುತ್ರ ಅರುಣ್ ರಾಜಕೀಯ ಭವಿಷ್ಯ ಮುಂದೆ ನೋಡೋಣ. ಪಕ್ಷ ಈ ಬಗ್ಗೆ ಏನು ತೀರ್ಮಾನ ಮಾಡುತ್ತದೆ ಎಂದು ಕಾದು ನೋಡುತ್ತೇನೆ ಎಂದರು.
ಇದನ್ನೂ ಓದಿ : ಯಾವುದೇ ಕಾರಣಕ್ಕೂ ರಾಜಕೀಯ ನಿವೃತ್ತಿ ಇಲ್ಲ, ನಿವೃತ್ತಿ ಅನ್ನೋದೆಲ್ಲ ನಾಟಕ: ವಿ.ಸೋಮಣ್ಣ