ತುಮಕೂರು: ನನ್ನ ಕಾರ್ಯಕ್ರಮಗಳು ಮತ್ತು ನನ್ನ ನಡವಳಿಕೆಯನ್ನು ಇನ್ನೊಬ್ಬರೊಂದಿಗೆ ಹೋಲಿಕೆ ಮಾಡಬೇಡಿ. ನಾನು ಆ ರೀತಿ ಜೀವನ ಮಾಡಿಲ್ಲ. 15 ವರ್ಷ ಮಂತ್ರಿ ಆಗಿದ್ದೆ ಅನ್ನೋದಕ್ಕಿಂತ ಧ್ವನಿ ಇಲ್ಲದವರಿಗೆ ಕೆಲಸ ಮಾಡಿದ್ದೇನೆ ಎಂದು ಮಾಜಿ ಸಚಿವ ವಿ.ಸೋಮಣ್ಣ ತಿಳಿಸಿದರು.
ತುಮಕೂರಿನ ಸಿದ್ದಗಂಗಾ ಮಠದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಲ ಬಂದಾಗ ಎಲ್ಲವೂ ಸರಿ ಹೋಗುತ್ತದೆ. ಸತ್ಯವನ್ನು ಮರೆಮಾಚಲು ಯಾರಿಂದಲೂ ಸಾಧ್ಯವಿಲ್ಲ. ನನ್ನ ನೇರ ನುಡಿಯ ಸಂಸ್ಕಾರ ಸಿದ್ದಗಂಗಾ ಮಠದಿಂದ ಬಂದಿದೆ ಎಂದರು.
ಮುಂದುವರೆದು ಮಾತನಾಡಿ, ಅರ್ಹತೆ ಅವಕಾಶ ವಂಚಿತವಾಗಬಾರದು. ಅರ್ಹತೆ ಯಾರ ಮನೆಯ ಸ್ವತ್ತೂ ಅಲ್ಲ. ಅರ್ಹತೆ ಇಲ್ಲದವರು ಹೇಗೆ ಬೇಕಾದರೂ ನಡೆದುಕೊಳ್ಳಬಹುದು ಅಂತಿಲ್ಲ. ಈ ಕುರಿತು ವರಿಷ್ಠರು ಯಾವ ರೀತಿ ನಡೆದುಕೊಳ್ಳಬೇಕು ಅಂತ ಹೇಳುತ್ತಾರೋ ಗೊತ್ತಿಲ್ಲ. ಹೈಕಮಾಂಡ್ ನಾಯಕರು ಆಗಿರುವ ತಪ್ಪನ್ನು ಯಾವ ರೀತಿ ಸರಿಪಡಿಸುತ್ತಾರೆ ಅನ್ನೋದು ತಿಳಿದಿಲ್ಲ. ಅನವಶ್ಯಕವಾಗಿ ನನ್ನನ್ನು ಯಾರೋ ಸಣ್ಣಪುಟ್ಟವರ ಜೊತೆಗೆ ಹೋಲಿಕೆ ಮಾಡಬೇಡಿ ಎಂದು ಮನವಿ ಮಾಡಿದರು.
ಸೋಮಣ್ಣ ಧೈರ್ಯದಿಂದ ಇರುವಂತೆ ಗೃಹ ಸಚಿವ ಪರಮೇಶ್ವರ್ ಹೇಳಿರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸುತ್ತಾ, ನಾನು ಯಾವತ್ತೂ ಅಧೈರ್ಯವಂತನಾಗಿಲ್ಲ. ನನ್ನ, ಅವರ ರಾಜಕೀಯ ಹಾಗೂ ಪ್ರೀತಿ 50 ವರ್ಷದ್ದು. ನನ್ನ ಮಕ್ಕಳು ಶಾಲೆಗೆ ಹೋಗುತ್ತಿರಲಿಲ್ಲ, ಆಗಲೇ ಗಂಗಾಧರಪ್ಪನವರು ನಮ್ಮ ಮನೆಗೆ ಬರುತ್ತಿದ್ದರು. ಗಂಗಾಧರಪ್ಪನವರಿಂದಲೇ ಅವರ ಮಕ್ಕಳು ಪರಿಚಯವಾಗಿರುವುದು. ನನ್ನದೇ ಆಗಿರುವ ಹೋರಾಟವಿದೆ. ಸ್ವತಂತ್ರವಾಗಿ ಬೆಂಗಳೂರಿನಲ್ಲಿ ಗೆದ್ದು ಬಂದಿದ್ದೇನೆ. ನಾನು ಮಾಡಿದಂತಹ ತೀರ್ಮಾನಗಳ ಮೇಲೆ ಆಕಾಶವಿದೆ ಅಂತ ಆಕಾಶಕ್ಕೆ ಉಗುಳಿದೆ. ಅದು ನನ್ನ ಮೇಲೆ ಬಿದ್ದಿದೆ. ಅದನ್ನು ಒರೆಸಿಕೊಂಡು ಹೋಗುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.
ಮತ್ತೊಂದೆಡೆ, ಬೆಳಗಾವಿಯ ಸುವರ್ಣಸೌಧದಲ್ಲಿ ಮಾತನಾಡಿರುವ ಶಾಸಕ ಬಸನಗೌಡ ಯತ್ನಾಳ್, ಸೋಮಣ್ಣ ಕಾರಣಾಂತರಗಳಿಂದ ತೀರ್ಮಾನವನ್ನು ಮುಂದೂಡಿದ್ದಾರೆ. ಭೇಟಿಯಾದಾಗ ಕರ್ನಾಟಕದ ಪರಿಸ್ಥಿತಿಯನ್ನು ಹೇಳುತ್ತೇನೆ. ಕರ್ನಾಟಕದಲ್ಲಿ ಏನು ನಡೆದಿದೆ, ನಮ್ಮ ಪಕ್ಷ ಈ ಮಟ್ಟಿಗೆ ಬರಲು ಇಬ್ಬರು ಮಹಾನುಭಾವರು ಕಾರಣ. ಒಬ್ಬ ದೆಹಲಿ ಮಹಾನುಭಾವರು. ಇನ್ನೊಬ್ಬರು ಕರ್ನಾಟಕದವರು. ಇಬ್ಬರು ಸಿಂಗ್ಗಳು ಆಗಿದ್ದಾರೆ. ಅವರಿಂದ ಪಕ್ಷ ಹಾಳಾಗಿದೆ. ನಾನಾಗಿ ದೆಹಲಿಗೆ ಹೋಗುತ್ತಿಲ್ಲ. ದೆಹಲಿ ಕರೆ ಬಂದ ಬಳಿಕ ಹೋಗುತ್ತೇನೆ. ಆಗ ರಾಷ್ಟ್ರೀಯ ಅಧ್ಯಕ್ಷ ಹಾಗೂ ಗೃಹ ಸಚಿವರನ್ನು ಭೇಟಿಯಾಗುತ್ತೇನೆ. ಪಕ್ಷದ ಕಚೇರಿಯಿಂದ ಕರೆ ಬಂದಿದೆ. ವಿ.ಸೋಮಣ್ಣ, ರಮೇಶ್ ಜಾರಕಿಹೊಳಿಗೂ ಹೇಳಿರಬಹದು. ಆದರೆ, ದೆಹಲಿಗೆ ಹೋಗುವುದಂತೂ ನಿಶ್ಚಿತ ಎಂದು ಸ್ವಪಕ್ಷದ ವಿರುದ್ಧವೇ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಕರೆಯ ನಂತರ ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿ ಮಾಡಲು ದೆಹಲಿಗೆ ಹೋಗುತ್ತೇನೆ: ಶಾಸಕ ಯತ್ನಾಳ್