ತುಮಕೂರು : ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಯ ಟೆಂಡರ್ ಪ್ರಕ್ರಿಯೆಯಲ್ಲಿನ ಅವ್ಯವಹಾರಕ್ಕೆ ಸಂಬಂಧಪಟ್ಟಂತೆ ಶಾಸಕ ಹೆಚ್ ವಿಶ್ವನಾಥ್ ಆರೋಪಿಸಿರುವುದು ಸತ್ಯವಾಗಿದೆ ಎಂದು ಮಾಜಿ ಸಚಿವ ಟಿ ಬಿ ಜಯಚಂದ್ರ ಹೇಳಿದರು.
ತುಮಕೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ತ್ವರಿತಗತಿಯಲ್ಲಿ ನಡೆಯಬೇಕು ಎಂಬ ಭಾವನೆ ಸರ್ಕಾರಕ್ಕಿಲ್ಲ. ಬದಲಾಗಿ ಆತುರಾತುರವಾಗಿ ಟೆಂಡರ್ ಕರೆದು ಹಣ ಬಿಡುಗಡೆ ಮಾಡಬೇಕು ಎಂಬ ಉದ್ದೇಶ ಹೊಂದಿದೆ. ಅಲ್ಲದೆ ಬೇರೆ ಯಾವುದೋ ಒಂದು ಉದ್ದೇಶವನ್ನು ಇರಿಸಿಕೊಂಡು ಯೋಜನೆಗೆ ಹಣ ಬಿಡುಗಡೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ವಿಶ್ವನಾಥ್ ಆರೋಪಿಸಿರುವಂತೆ 21,000 ಕೋಟಿ ರೂ. ಬಿಡುಗಡೆ ಮಾಡಲಾಗುತ್ತಿದೆ. ಆದರೆ, ಹಣ ಬಿಡುಗಡೆಗೆ ಮುನ್ನವೇ ಟೆಂಡರ್ ಕರೆಯಲಾಗುತ್ತಿರುವ ಔಚಿತ್ಯವೇನು ಎಂದು ಪ್ರಶ್ನಿಸಿದರು. ಅಂಕಿ- ಅಂಶಗಳನ್ನು ಇಟ್ಟುಕೊಂಡು ನೋಡಿದರೆ ಹೆಚ್. ವಿಶ್ವನಾಥ್ ಅವರು ಹೇಳುತ್ತಿರುವ ಮಾತುಗಳು ಸತ್ಯ ಎಂಬುದು ಮೇಲ್ನೋಟಕ್ಕೆ ಸಾಬೀತಾಗುತ್ತದೆ ಎಂದರು.
ಇನ್ನು, ಇದೇ ವೇಗದಲ್ಲಿ ಭದ್ರಾ ಮೇಲ್ದಂಡೆ ಕಾಮಗಾರಿ ಯೋಜನೆ ಸಾಗಿದರೆ ಶಿರಾ ಭಾಗಕ್ಕೆ ನೀರು ಹರಿಯುವುದು ಇನ್ನು ಹತ್ತು ವರ್ಷಗಳು ಆಗುತ್ತದೆ. ಆದರೆ, ಬಿಜೆಪಿ ಮುಖಂಡರು ಮಾತ್ರ ಇನ್ನೊಂದು ವರ್ಷದಲ್ಲಿ ನೀರು ಹರಿಯಲಿದೆ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ಟೀಕಿಸಿದರು.