ತುಮಕೂರು : ಜಿಲ್ಲೆಯ ಕುಣಿಗಲ್ ತಾಲೂಕಿನಲ್ಲಿ ಜಿಂಕೆ ಮತ್ತು ವನ್ಯ ಜೀವಿಗಳ ಮಾಂಸ ಬಳಸಿ ಆಹಾರ ತಯಾರಿಸುತ್ತಿದ್ದ ಹೋಟೆಲ್ಗಳ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ 5 ಕೆಜಿ ಜಿಂಕೆ ಮಾಂಸ ಮತ್ತು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.
ರಾಮನಗರ ಹಾಗೂ ಕುಣಿಗಲ್ ಅರಣ್ಯ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದು, ಕುಣಿಗಲ್ ತಾಲೂಕಿನ ಅಂಚೆಪಾಳ್ಯ ಗ್ರಾಮದ ರಾಷ್ಟ್ರೀಯ ಹೆದ್ದಾರಿಯ ಪಕ್ಕದ ಹೋಟೆಲ್ಗಳ ಮೇಲೆ ದಾಳಿ ನಡೆಸಿದ್ದರು. ತಿಪ್ಪಸಂದ್ರ ಹ್ಯಾಂಡ್ ಪೋಸ್ಟ್ ಬಳಿಯ ತಾಜ್ ಹೋಟೆಲ್‌ಗಳಲ್ಲಿ ಈ ಕೃತ್ಯ ಬೆಳಕಿಗೆ ಬಂದಿದೆ.
ಅರಣ್ಯ ಇಲಾಖೆ ಅಧಿಕಾರಿಗಳ ಈ ದಿಢೀರ್ ದಾಳಿಯಿಂದ ಭಯಗೊಂಡು ಹೋಟೆಲ್ ಮಾಲೀಕ ಹಾಗೂ ಗ್ರಾಹಕರು ಪರಾರಿಯಾಗಿದ್ದು, ಸಿಬ್ಬಂದಿ ಸತೀಶ್ ಎಂಬಾತನನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಇನ್ನು ಹೋಟೆಲ್‌ಗಳಲ್ಲಿ ಪತ್ತೆಯಾಗಿರುವ ಮಾಂಸವನ್ನು ವೈದ್ಯಕೀಯ ಪರೀಕ್ಷಾ ಕೇಂದ್ರಕ್ಕೆ ಕಳುಹಿಸಿದ್ದು, ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ ಎಂದು ಅರಣ್ಯ ಇಲಾಖೆ ಮೂಲಗಳು ಸ್ಪಷ್ಟಪಡಿಸಿವೆ.
ಈ ದಾಳಿಯಲ್ಲಿ ರಾಮನಗರ ಡಿಎಫ್ಒ ಸದಾಶಿವ ಹೆಗ್ಡೆ, ಮಾಗಡಿ ಆರ್ಎಫ್ಒ ಪುಷ್ಪಲತಾ ಹಾಗೂ ಕುಣಿಗಲ್ ಉಪ ಸಂರಕ್ಷಣಾಧಿಕಾರಿ ಮಂಜುನಾಥ್ ಇದ್ದರು.