ತುಮಕೂರು: ನಟಿ ಕಂಗನಾ ರಾಣಾವತ್ ವಿರುದ್ಧ ತುಮಕೂರಿನ ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ (ಯು/ಎಸ್ -44 , 108, 153, 153ಎ, 504) ಅನ್ವಯ ಪ್ರಕರಣ ದಾಖಲಾಗಿದೆ.
![FIR filed against actor Kangana Ranawat](https://etvbharatimages.akamaized.net/etvbharat/prod-images/kn-tmk-01-firagainstkangana-script-7202233_13102020141516_1310f_1602578716_526.jpg)
![FIR filed against actor Kangana Ranawat](https://etvbharatimages.akamaized.net/etvbharat/prod-images/kn-tmk-01-firagainstkangana-script-7202233_13102020141516_1310f_1602578716_844.jpg)
ಅ.12ರಂದು ತುಮಕೂರಿನ ಪಿಸಿಜೆ ಮತ್ತು ಜೆಎಂಎಫ್ಸಿ ನ್ಯಾಯಾಲಯದಿಂದ ಬಂದ ಪಿಸಿಆರ್ ಸಂಖ್ಯೆ 452/2020 ರಲ್ಲಿನ ಫಿರಿಯಾದಿ ರಮೇಶ್ ನಾಯ್ಕ ಎಂಬುವರು ಕೊಟ್ಟಿರುವ ದೂರಿನಲ್ಲಿ, ಮುಂಬೈನ ಕಂಗನಾ ರಾಣಾವತ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಸಕ್ರಿಯರಾಗಿದ್ದಾರೆ. ಸೆ.21ರಂದು ಅವರ ಟ್ವೀಟ್ ಖಾತೆಯಿಂದ ‘ಸಿಎಎ ವಿರುದ್ಧ ತಪ್ಪು ಮಾಹಿತಿ, ಊಹಾಪೋಹಗಳನ್ನು ಹಂಚಿ ದೇಶದಲ್ಲಿ ಗಲಭೆ ಸೃಷ್ಟಿಸಿದ ಜನರೇ ಇಂದು ಕೃಷಿ ಮಸೂದೆಗಳ ಬಗ್ಗೆ ಸಲ್ಲದ ಮಾಹಿತಿಗಳನ್ನು ಹಂಚುತ್ತಿದ್ದಾರೆ. ಇವರು ಭಯೋತ್ಪಾದಕರು' ಎಂದು ಪೋಸ್ಟ್ ಮಾಡಿದ್ದರು.
ಈ ಮೂಲಕ ಕಂಗನಾ, ದುರುದ್ದೇಶದಿಂದ ದೇಶದಲ್ಲಿ ಕೃಷಿ ಸಂಬಂಧಿತ ವಿಧೇಯಕಗಳನ್ನು ವಿರೋಧಿಸುತ್ತಿರುವ ರೈತರನ್ನು ಭಯೋತ್ಪಾದಕರೆಂದು ನಿಂದಿಸಿದ್ದಾರೆ. ಸಮಾಜದಲ್ಲಿ ಅಶಾಂತಿ ಉಂಟು ಮಾಡುವ ಉದ್ದೇಶದಿಂದ ಹಾಗೂ ದೊಂಬಿಗೆ ಪ್ರಚೋದನೆ ನೀಡುವ ಹೇಳಿಕೆಗಳನ್ನು ಅವರು ನೀಡಿದ್ದಾರೆ. ಹೀಗಾಗಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ದೂರು ನೀಡಿದ್ದರು.