ತುಮಕೂರು: ಜಿಲ್ಲೆಯ ಬಯಲುಸೀಮೆ ಭಾಗದ ಪಾವಗಡ, ಶಿರಾ, ಮಧುಗಿರಿ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ನಕಲಿ ವೈದ್ಯರ ಹಾವಳಿ ಹೆಚ್ಚಾಗಿದ್ದು, ಕೆಲ ಕೋರ್ಸ್ಗಳ ಸರ್ಟಿಫಿಕೇಟ್ ದಾಖಲೆ ಇಟ್ಟುಕೊಂಡು ಕ್ಲಿನಿಕ್ ನಡೆಸುತ್ತಿರುವುದು ಬೆಳಕಿಗೆ ಬಂದಿದೆ.
ಎಂಬಿಬಿಎಸ್ ವೈದ್ಯಕೀಯ ಕೋರ್ಸ್ ಮಾಡದೆ ಬಿಹಾರ, ಚೈನ್ನೈ ಸೇರಿದಂತೆ ಅಲ್ಲಿನ ಕೆಲ ವಿಶ್ವವಿದ್ಯಾಲಯಗಳಿಂದ ಸರ್ಟಿಫಿಕೇಟ್ಗಳನ್ನು ಪಡೆದು ಕ್ಲಿನಿಕ್ ಗಳನ್ನು ನಡೆಸುತ್ತಿದ್ದಾರೆ. ಕೇವಲ ಆರು ತಿಂಗಳ ಸರ್ಟಿಫಿಕೇಟ್ ಕೋರ್ಸ್ ಗಳು ಕ್ಲಿನಿಕ್ ಗಳಲ್ಲಿ ಇರಿಸಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ. ಈಗಾಗಲೇ ಜಿಲ್ಲಾ ಆರೋಗ್ಯಾಧಿಕಾರಿಗಳು ನಕಲಿ ಕ್ಲಿನಿಕ್ ಗಳ ಮೇಲೆ ನಡೆಸಿದ ದಾಳಿಯಲ್ಲಿ ವಿಷಯ ಬೆಳಕಿಗೆ ಬಂದಿದೆ.
ಇಂತಹ ಸರ್ಟಿಫಿಕೆಟ್ ಕೋರ್ಸ್ ಗಳು ಆಯಾ ರಾಜ್ಯಕ್ಕೆ ಮಾತ್ರ ಸೀಮಿತವಾಗಿರುತ್ತವೆ. ಆದರೆ ರಾಜ್ಯದಲ್ಲಿ ಇದಕ್ಕೆ ಅನುಮತಿ ಇಲ್ಲ. ಈಗಾಗಲೇ ಒಟ್ಟು 12 ನಕಲಿ ಸರ್ಟಿಫಿಕೆಟ್ಗಳನ್ನು ವಶಕ್ಕೆ ತೆಗೆದುಕೊಂಡು ಆರೋಗ್ಯ ಇಲಾಖೆಯ ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.