ತುಮಕೂರು: ಮಹಾನಗರ ಪಾಲಿಕೆಯಲ್ಲಿ ಶನಿವಾರ ನಡೆದ ತುರ್ತು ಸಭೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಲು ಅಧಿಕಾರಿಗಳು ಸಂಪೂರ್ಣ ನಿರ್ಲಕ್ಷ್ಯ ತಾಳಿದ್ದಾರೆ ಎಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ
ಪಾಲಿಕೆಯ 35 ವಾರ್ಡ್ಗಳಲ್ಲಿಯೂ ನೀರಿನ ಸಮಸ್ಯೆ ಮಿತಿ ಮೀರಿದೆ. ಕೇವಲ ನೀರಿನ ಸಮಸ್ಯೆ ಪರಿಹರಿಸುವ ಟೆಂಡರ್ ಮಾಡುತ್ತ ಕುಳಿತರೆ ಜನ ನಮ್ಮನ್ನು ಬಯ್ಯುತ್ತಾರೆ ಅಧಿಕಾರಿಗಳು ಇದರಲ್ಲಿ ಕಾಲಹರಣ ಮಾಡುತ್ತಿದ್ದಾರೆ ಎಂದು 11ನೇ ವಾರ್ಡ್ ಸದಸ್ಯ ಮನು ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಉತ್ತರಿಸಿದ ಮೇಯರ್ ಲಲಿತ ರಮೇಶ್, ಇದುವರೆಗೂ ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿದ್ದ ಕಾರಣ ಕ್ರಮ ಕೈಗೊಳ್ಳಲು ಸಾಧ್ಯವಾಗಿಲ್ಲ, ಆಯುಕ್ತರ ಗಮನಕ್ಕೆ ತರಲಾಗಿತ್ತು. ಅವರು ಆ ಸಂದರ್ಭದಲ್ಲಿ ನೀರಿನ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಬೇಕಿತ್ತು ಎಂದು ಹೇಳಿದರು.
4 ನೇ ವಾರ್ಡ್ ನ ಸದಸ್ಯ ದೀಪಶ್ರೀ ತಮ್ಮ ವಾರ್ಡಿನಲ್ಲಿ ಬೋರ್ವೆಲ್ ನಲ್ಲಿ ಬರುತ್ತಿದ್ದ ಕೊಳಚೆ ನೀರನ್ನು ತಂದು ಪ್ರದರ್ಶಿಸಿದರು. ಕಳೆದ ಕೆಲವು ದಿನಗಳಿಂದ ಆಯಿಲ್ ಮಿಲ್ ರಸ್ತೆಯ ಕೊಳವೆ ಬಾವಿಯಲ್ಲಿ ತ್ಯಾಜ್ಯ ನೀರು ಬರುತ್ತಿದೆ. ನೀರನ್ನು ಕುಡಿದರೆ ಜನರು ಅನಾರೋಗ್ಯ ಪೀಡಿತರಾಗುತ್ತಾರೆ. ಇದಕ್ಕೆ ಯಾರು ಹೊಣೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೆ ವೇಳೆ ಮಾತನಾಡಿದ ಪಾಲಿಕೆಯ ವಿರೋಧ ಪಕ್ಷದ ನಾಯಕ ರಮೇಶ್, ಪಾಲಿಕೆ ವ್ಯಾಪ್ತಿಯಲ್ಲಿ ಸಮಸ್ಯೆ ಎದುರಾಗುವ ಮುನ್ನವೇ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ಕೆರೆಗಳಲ್ಲಿ ನೀರು ಸಂಗ್ರಹಿಸುವ ಕೆಲಸ ಮಾಡಬೇಕಿದೆ. ಯಾವ ವಾರದಲ್ಲಿ ನೀರಿನ ಸಮಸ್ಯೆ ಇದೆ ಎಂದು ಸರ್ವೆ ಮಾಡಿ ಕ್ರಮ ಕೈಗೊಳ್ಳಬೇಕು. ಒಂದು ಲೀಟರ್ ಶುದ್ಧ ನೀರು ಪಡೆಯಬೇಕಾದರೆ ಎರಡು ಲೀಟರ್ ತ್ಯಾಜ್ಯ ನೀರು ಬರುತ್ತದೆ. ಅದನ್ನ ಕೂಡ ಸಮರ್ಥವಾಗಿ ಬಳಸಬೇಕೆಂದು ಸಲಹೆ ನೀಡಿದರು.