ತುಮಕೂರು: ಬೆಳ್ಳಂಬೆಳಗ್ಗೆ ತುಮಕೂರು ತಾಲೂಕು ಊರುಕೆರೆ ಗ್ರಾಮದಲ್ಲಿ ಮಾರಕಾಸ್ತ್ರ ಹಿಡಿದು ಓಡಾಡಿರೋ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಈಗಾಗಲೇ ಹಲವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಂಶಿ ಕೃಷ್ಣ ತಿಳಿಸಿದ್ದಾರೆ.
ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮಾರಕಾಸ್ತ್ರ ಹಿಡಿದು ಓಡಾಡಿರುವವರ ವಿಚಾರಣೆ ಮಾಡಿ, ರೌಡಿಗಳ ಅಟ್ಟಹಾಸಕ್ಕೆ ಬ್ರೇಕ್ ಹಾಕಲಾಗುವುದು. ಊರುಕೆರೆ ಗ್ರಾಮಕ್ಕೆ ತೆರಳಿ ಭಯಮುಕ್ತ ವಾತಾವರಣ ನಿರ್ಮಿಸಲಾಗುವುದು ಎಂದರು.
ಮಚ್ಚು, ಲಾಂಗು ಹಿಡಿದು ಓಡಾಡಿದ ಕೃಷ್ಣಪ್ಪ, ಜಗದೀಶ್, ಪುರುಷೊತ್ತಮ, ಮಂಜುನಾಥ ಎಂಬುವವರು ಎಂದು ಗೊತ್ತಾಗಿದೆ. ಅಲ್ಲದೆ ಇದ್ರಲ್ಲಿ ಜಗದೀಶ್ ರೌಡಿಶೀಟರ್ ಆಗಿದ್ದಾನೆ. ಕೃಷ್ಣಪ್ಪ ಕಾರು ಹಿಂದಕ್ಕೆ ತೆಗೆಯುವಾಗ ರಾಜಣ್ಣಗೆ ತಾಗಿತ್ತು. ಇಬ್ಬರೂ ಸಮೀಪದ ಸಂಬಂಧಿಗಳಾಗಿದ್ದು, ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿಕೊಂಡಿದ್ದಾರೆ. ಆಗಾಗ್ಗೆ ಗಲಾಟೆ ನಡೆಯುತ್ತಿತ್ತು. ಹೀಗಾಗಿ ಕೃಷ್ಣಪ್ಪ ತನ್ನ ಸಹಚರರೊಂದಿಗೆ ಗ್ರಾಮದಲ್ಲಿ ಜನರನ್ನು ಭಯಬೀಳಿಸಲು ಮಚ್ಚು, ಲಾಂಗ್ ಹಿಡಿದು ಓಡಾಡಿದ್ದಾನೆ. ಮಾರಕಾಸ್ತ್ರಗಳನ್ನು ಹಿಡಿದು ಓಡಾಡಿರುವ ದೃಶ್ಯ ವೈರಲ್ ಆಗಿದೆ. ಹೀಗಾಗಿ ಪ್ರಕರಣ ದಾಖಲಿಸಲಾಗುವುದು ಎಂದರು.