ತುಮಕೂರು: ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆಯಬೇಕಿದ್ದ ಸಾಮಾನ್ಯ ಸಭೆ ಕೋರಂ ಕೊರತೆಯಿಂದ ಮುಂದೂಡಲಾಯಿತು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಲತಾ ರವಿಕುಮಾರ್ ತಿಳಿಸಿದ್ದಾರೆ .
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಭೆಗೆ 43 ಸದಸ್ಯರು ಬರಬೇಕಿತ್ತು. ಕೇವಲ 25 ಸದಸ್ಯರು ಮಾತ್ರ ಆಗಮಿಸಿದ್ದರಿಂದಾಗಿ ಕೋರಂ ಕೊರತೆ ಉಂಟಾಯಿತು. ಹಾಗಾಗಿ ಸಭೆ ಮುಂದೂಡಲಾಗಿದೆ ಎಂದರು. ಸದಸ್ಯರು ಸಭೆಗೆ ಏಕೆ ಪಾಲ್ಗೊಂಡಿಲ್ಲ ಎಂಬುದರ ಬಗ್ಗೆ ಮಾಹಿತಿ ಸ್ಪಷ್ಟವಾಗಿ ತಿಳಿದಿಲ್ಲ. ಸದಸ್ಯರು ಸಭೆಗೆ ಪಾಲ್ಗೊಳ್ಳದೇ ಇರುವುದು ಈಗ ತಿಳಿದು ಬಂದಿದೆ. ಹಾಗಾಗಿ ಈ ವಿಚಾರದ ಬಗ್ಗೆ ಮಾಹಿತಿ ತಿಳಿದುಕೊಳ್ಳುತ್ತೇನೆ ಎಂದರು.
ಜಿಲ್ಲಾ ಪಂಚಾಯತ್ ಸದಸ್ಯ ವೈ ಹೆಚ್ ಹುಚ್ಚಯ್ಯ ಮಾತನಾಡಿ, ಸುಮಾರು ನಾಲ್ಕೈದು ತಿಂಗಳಿನಿಂದ ಸಭೆ ನಡೆದಿಲ್ಲ. ಅನೇಕ ವಿಷಯಗಳ ಬಗ್ಗೆ ಚರ್ಚೆ ನಡೆಯಬೇಕಿತ್ತು. ತಕ್ಷಣ ಜಿಲ್ಲಾ ಪಂಚಾಯತ್ನ ಸದಸ್ಯರೊಂದಿಗೆ ತುರ್ತು ಸಭೆ ಕರೆದು ಪರಿಹಾರ ಕಂಡುಕೊಳ್ಳಬೇಕು ಎಂದು ಅಧ್ಯಕ್ಷರಲ್ಲಿ ನಾನು ಮನವಿ ಮಾಡಿಕೊಳ್ಳುತ್ತೇನೆ ಎಂದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಉಪಾಧ್ಯಕ್ಷೆ ಶಾರದ ನರಸಿಂಹಮೂರ್ತಿ, ಜಿಲ್ಲಾ ಪಂಚಾಯಿತಿ ಸಿಇಒ ಶುಭಾ ಕಲ್ಯಾಣ್, ಜಿಲ್ಲಾ ಪಂಚಾಯತ್ ಕೆಲ ಸದಸ್ಯರು ಹಾಗೂ ಅಧಿಕಾರಿಗಳು ಹಾಜರಿದ್ದರು.