ತುಮಕೂರು: ಸಮಗ್ರ ಕೃಷಿ ಪದ್ಧತಿ ಯೋಜನೆಯಡಿ ರೈತರಿಗೆ ಯಾವುದೇ ಸೌಲಭ್ಯ ತಲುಪಿಲ್ಲ. ತಾಲೂಕುವಾರು ಕೃಷಿ ಇಲಾಖೆಯಿಂದ ಎರಡು ಕೋಟಿ ರೂ.ಹಣ ವಿತ್ ಡ್ರಾ ಮಾಡಲಾಗಿದ್ದು,. ಅಧಿಕಾರಿಗಳು ಹಣವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ನನಗೆ ಕೃಷಿ ಖಾತೆಯನ್ನು ಕೊಡಿ ಎಂದು ಕೇಳಿದ್ದೆ. ಕೊಟ್ಟಿದ್ದರೆ ನಿಮಗೆಲ್ಲ ಚಳಿ ಬಿಡಿಸುತ್ತಿದ್ದೆ ಎಂದು ಜೆ.ಸಿ ಮಾಧುಸ್ವಾಮಿ ಕೃಷಿ ಇಲಾಖೆ ಅಧಿಕಾರಿ ವಿರುದ್ಧ ಕಿಡಿಕಾರಿದರು.
ತುಮಕೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಎಲ್ಲಾ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಹರಿಜನ, ಗಿರಿಜನ ವಿಶೇಷ ಘಟಕದ ಯೋಜನೆಯಡಿ ಕೃಷಿ ಇಲಾಖೆಯಿಂದ ನೀಡುವ ಸೌಲಭ್ಯಗಳನ್ನು ಅಧಿಕಾರಿಗಳು ರೈತರಿಗೆ ಸಮರ್ಪಕವಾಗಿ ನೀಡುವಲ್ಲಿ ವಿಫಲರಾಗಿದ್ದಾರೆ. ಇದರಲ್ಲಿ ಕೋಟ್ಯಾಂತರ ರೂ. ಅವ್ಯವಹಾರ ನಡೆದಿದೆ. ಎಷ್ಟು ರೈತರಿಗೆ ಸೌಲಭ್ಯ ನೀಡಿದ್ದೀರಾ ಎಂದು ಕೃಷಿ ಇಲಾಖೆ ಅಧಿಕಾರಿಗಳಿಗೆ ಪ್ರಶ್ನಿಸಿದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ಜಯಸ್ವಾಮಿ ಸಭೆಯಲ್ಲಿ ಸರಿಯಾಗಿ ಮಾಹಿತಿ ನೀಡದಿದ್ದಕ್ಕೆ ಗರಂ ಆದ ಸಚಿವ ಮಾಧುಸ್ವಾಮಿ, ರೈತರಿಗೆ ತರಬೇತಿ ನೀಡುವುದು. ಒಳ್ಳೆಯ ಮಾತು ಹೇಳುವುದು. ಯೋಜನೆಗಳ ಬಗ್ಗೆ ಅರಿವು ಮೂಡಿಸುವಲ್ಲಿ ಅಧಿಕಾರಿಗಳು ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಜಿಲ್ಲೆಯಲ್ಲಿ ಬರಗಾಲವಿದೆ. ರೈತರನ್ನು ಕರೆಸಿ ಮಾರ್ಗದರ್ಶನ ನೀಡಿ ಎಂದು ಸಲಹೆ ನೀಡಿದರು. ಜಿಲ್ಲೆಯಲ್ಲಿ ನರೇಗಾ ಯೋಜನೆಯಡಿ ಜಾಬ್ ಕಾರ್ಡ್ ಮಾಡಿಕೊಡಲಾಗುತ್ತಿಲ್ಲ. ಜಾಬ್ ಕಾರ್ಡ್ ಇಲ್ಲದೆ, ರೈತರು ತಮ್ಮ ಜಮೀನುಗಳಲ್ಲಿ ಬದು ನಿರ್ಮಾಣ ಹಾಗೂ ಕೃಷಿ ಹೊಂಡ ನಿರ್ಮಿಸಲು ಸಾಧ್ಯವಾಗುತ್ತಿಲ್ಲ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಈ ತಿಂಗಳ ಕೊನೆಯಲ್ಲಿ ಕೆಡಿಪಿ ಸಭೆ ಕರೆಯಲಾಗುವುದು. ಜಿಲ್ಲಾಮಟ್ಟದ ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಸರಿಯಾದ ಮಾಹಿತಿಯನ್ನು ಸಭೆಯಲ್ಲಿ ನೀಡಬೇಕು. ತಮ್ಮ ಪರವಾಗಿ ಬೇರೆಯವರು ಮಾಹಿತಿ ನೀಡುವಂತಿಲ್ಲ. ನಾನು ಯಾರನ್ನು ವೈಯಕ್ತಿಕವಾಗಿ ತೆಗೆದುಕೊಳ್ಳುವುದಿಲ್ಲ. ಸಮಸ್ಯೆ ಬಂದಾಗ ಯಾರನ್ನು ಸುಮ್ಮನೆ ಬಿಡುವುದಿಲ್ಲ. ಕೈಲಾದರೆ ಕೆಲಸ ಮಾಡಿ ಇಲ್ಲವಾದರೆ ಬೇರೆ ಕಡೆ ವರ್ಗಾವಣೆ ಮಾಡಿಸಿಕೊಳ್ಳಿ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ತಹಶೀಲ್ದಾರ್ಗಳು ತಮ್ಮ ಬಳಿ ಬರುವಂತಹ ರೈತರನ್ನು ತಂದೆ ತಾಯಿಯಂತೆ ಗೌರವಿಸಿ. ಏಕವಚನದ ಪದ ಬಳಸುವುದನ್ನು ಮೊದಲು ಬಿಡಿ. ರೈತರ ಜೊತೆ ಮಾನವೀಯತೆಯಿಂದ ನಡೆದುಕೊಳ್ಳಿ. ಅಧಿಕಾರ ಶಾಶ್ವತವಲ್ಲ ಮಾನವೀಯತೆ ಬೆಳೆಸಿಕೊಳ್ಳಿ ಎಂದು ಸಲಹೆ ನೀಡಿದರು.