ತುಮಕೂರು: ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಭೋವಿ ಸಮುದಾಯದ ಗ್ರಾಮ ಪಂಚಾಯಿತಿ ಸದಸ್ಯರನ್ನು ಸನ್ಮಾನಿಸಲಾಯಿತು.
ತುಮಕೂರು ನಗರದ ಗಾಜಿನ ಮನೆ ಅವರಣದಲ್ಲಿ ನಡೆದ ಜಿಲ್ಲಾ ಭೋವಿ ಸಮಾವೇಶದಲ್ಲಿ 65 ಮಂದಿ ಭೋವಿ ಸಮುದಾಯದ ಗ್ರಾಮ ಪಂಚಾಯಿತಿ ಸದಸ್ಯರನ್ನು ಹಿಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಸನ್ಮಾನಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸ್ವಾಮೀಜಿ, ಜಿಲ್ಲೆಯ ಕೊರಟಗೆರೆ, ಮಧುಗಿರಿ, ತುಮಕೂರು ತಾಲ್ಲೂಕು ಹಾಗೂ ಶಿರಾ ತಾಲೂಕಿನ ವ್ಯಾಪ್ತಿಯಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭೋವಿ ಸಮುದಾಯದ ಜನರಿದ್ದಾರೆ. ಸಮುದಾಯದಲ್ಲಿ ಇರುವ ಮುಖಂಡರಿಗೆ ರಾಜಕೀಯವಾಗಿ, ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಶಕ್ತಿ ತುಂಬುವ ಕೆಲಸವನ್ನು ಸಮುದಾಯದ ಜನರು ಮಾಡಬೇಕಿದೆ ಎಂದರು.
ಸಮುದಾಯದ ಏಳಿಗೆಗಾಗಿ ಅಗತ್ಯವಿರುವಂತಹ ಸರ್ಕಾರಿ ಸೌಲಭ್ಯಗಳನ್ನು ಬಳಸಿಕೊಳ್ಳಲು ಸಮುದಾಯದಲ್ಲಿ ಜಾಗೃತಿ ಮೂಡಿಸಬೇಕಿದೆ. ಈ ಮೂಲಕ ಅಭಿವೃದ್ಧಿಪರ ಚಿಂತನೆಯನ್ನು ಮುಖಂಡರು ಮಾಡಬೇಕಿದೆ ಎಂದು ಸ್ವಾಮೀಜಿ ಕರೆ ನೀಡಿದರು.