ತುಮಕೂರು: ಕರ್ನಾಟಕ ಹಾಲು ಮಹಾಮಂಡಳಿ, ನಗರ ಹಾಲು ಒಕ್ಕೂಟ ಮತ್ತು ರೋಟರಿ ಸಂಸ್ಥೆ ಸಹಭಾಗಿತ್ವದಲ್ಲಿ ಕಾಮಧೇನು ಯೋಜನೆಯಡಿ ತುಮಕೂರು ಗ್ರಾಮಾಂತರದ ದುರ್ಗದ ಹಳ್ಳಿಯ ಮಹಿಳೆಯರಿಗೆ ಉಚಿತವಾಗಿ ಹಸುಗಳನ್ನು ವಿತರಣೆ ಮಾಡಲಾಯಿತು.
ಇದೇ ವೇಳೆ ರೋಟರಿಯ ಜಿಲ್ಲಾ ಪಾಲಕಿ ಆಶಾ ಪ್ರಸನ್ನಕುಮಾರ್ ಮಾತನಾಡಿ, ಗ್ರಾಮೀಣ ಮಟ್ಟದ ಮಹಿಳೆಯರನ್ನು ಆರ್ಥಿಕವಾಗಿ ಸದೃಢರನ್ನಾಗಿಸುವ ಉದ್ದೇಶದಿಂದ ಉಚಿತವಾಗಿ ಹಸುಗಳನ್ನು ವಿತರಣೆ ಮಾಡಲಾಗುತ್ತಿದೆ. ಸುಮಾರು 30 ಹಸುಗಳನ್ನು ನೀಡಲಾಗಿದ್ದು, ಹೆಣ್ಣು ಮಕ್ಕಳನ್ನು ಸಬಲೀಕರಣಗೊಳಿಸುವ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ ಎಂದರು. ಇದೇ ರೀತಿ ಉಳಿದ ಜಿಲ್ಲೆಯ ಮಹಿಳೆಯರಿಗೂ ಹಸುಗಳನ್ನು ಉಚಿತವಾಗಿ ನೀಡಲು ಚರ್ಚೆ ನಡೆಸಲಾಗುತ್ತಿದೆ. ಸಹಕಾರ ಸಂಘಗಳನ್ನು ರಚಿಸಿಕೊಂಡು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡಂತಹ ಹೆಣ್ಣುಮಕ್ಕಳನ್ನು ಗುರುತಿಸಿ ಅವರಿಗೆ ಹಸುಗಳನ್ನು ನೀಡಲಾಗುತ್ತದೆ ಎಂದರು.
ಬಳಿಕ ತುಮಕೂರು ಹಾಲು ಒಕ್ಕೂಟದ ಅಧ್ಯಕ್ಷ ಸಿ ವಿ ಮಹಾಲಿಂಗಯ್ಯ ಮಾತನಾಡಿ, ಮಹಿಳಾ ಹಾಲು ಉತ್ಪಾದಕ ಸಹಕಾರ ಸಂಘದ ಮಹಿಳೆಯರಿಗೆ ಹಸುಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಮಹಿಳೆಯರನ್ನು ಆರ್ಥಿಕವಾಗಿ ಸದೃಢಗೊಳಿಸುವ ಉದ್ದೇಶದಿಂದ ಯೋಜನೆ ರೂಪಿಸಲಾಗಿದೆ. ಈಗಾಗಲೇ 200ಕ್ಕೂ ಹೆಚ್ಚು ಮಹಿಳಾ ಸಹಕಾರ ಸಂಘಗಳಿಗೆ ಹಸುಗಳನ್ನು ವಿತರಣೆ ಮಾಡಲಾಗಿದೆ ಎಂದರು.