ತುಮಕೂರು: ಶ್ರೀ ಶಿವಕುಮಾರ ಸ್ವಾಮೀಜಿ ಜೈವಿಕ ವನದ ಅಭಿವೃದ್ಧಿ ಕಾರ್ಯಕ್ಕೆ ಉಪಮುಖ್ಯಮಂತ್ರಿ ಡಾ. ಅಶ್ವತ್ಥ ನಾರಾಯಣ ಶಂಕುಸ್ಥಾಪನೆ ನೆರವೇರಿಸಿದರು.
ತುಮಕೂರು ನಗರದ ಹೊರವಲಯದ ಪಂಡಿತನ ಹಳ್ಳಿ ಸಮೀಪ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಲ್ಪತರು ನಾಡಿನಲ್ಲಿ ಜೈವಿಕ ತಂತ್ರಜ್ಞಾನ ಅಭಿವೃದ್ಧಿಗೆ ಅಪಾರ ಅವಕಾಶವಿದೆ. ಅಲ್ಲದೆ ಸಿದ್ದಗಂಗಾ ಮಠದ ವತಿಯಿಂದ ಜೈವಿಕ ತಂತ್ರಜ್ಞಾನ ಪಾರ್ಕ್ ಅಭಿವೃದ್ಧಿ ಪಡಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದರು.
ತುಮಕೂರು ನಗರದ ಗ್ರಾಮೀಣ ಪ್ರದೇಶವನ್ನು ಸಹ ತಂತ್ರಜ್ಞಾನ ಬಳಸಿಕೊಂಡು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸರ್ಕಾರ ಬದ್ಧವಾಗಿದೆ. ಇದರ ಜೊತೆಗೆ ಜಿಲ್ಲೆಯೂ ಸಹ ಅತಿವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದಾಗಿದೆ ಎಂದರು.
ಸಿದ್ದಗಂಗಾ ಶೈಕ್ಷಣಿಕ ಸಂಸ್ಥೆಯಿಂದ ಜೈವಿಕ ತಂತ್ರಜ್ಞಾನ ಪಾರ್ಕ್ ಅಭಿವೃದ್ಧಿ ಪಡಿಸುತ್ತಿರುವುದು ಸಾಕಷ್ಟು ಅವಕಾಶಗಳನ್ನು ಕಲ್ಪಿಸಿಕೊಡುತ್ತಿದೆ. ಈಗಾಗಲೇ ಶೈಕ್ಷಣಿಕ ಕ್ಷೇತ್ರದಲ್ಲಿ ವಿಶೇಷ ಕೊಡುಗೆ ನೀಡಿರುವ ಕಲ್ಪತರು ನಾಡಿನ ಅಭಿವೃದ್ಧಿಗೆ ಇಚ್ಛಾಶಕ್ತಿ ಅಗತ್ಯವಿದೆ. ಈ ನಿಟ್ಟಿನಲ್ಲಿ ಸರ್ಕಾರ ಗಮನ ಹರಿಸುತ್ತಿದೆ ಎಂದು ಹೇಳಿದರು.