ತುಮಕೂರು: ದೇವೇಗೌಡರು ಎಂದು ಕೂಡ ಜಾತಿ ರಾಜಕಾರಣ ಮಾಡಿದವರಲ್ಲ. ಎಲ್ಲಾ ಹಿಂದುಳಿದ ವರ್ಗದವರ ಅಭಿವೃದ್ಧಿಯತ್ತ ಸಣ್ಣ ಶಕ್ತಿಯನ್ನು ಧಾರೆಯೆರೆದವರು ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಜಿಲ್ಲೆಯ ಚಿಕ್ಕನಾಯಕನ ಹಳ್ಳಿಯಲ್ಲಿ ನಡೆದ ಜೆಡಿಎಸ್ ಪಕ್ಷದ ಪ್ರಚಾರ ಸಭೆಯಲ್ಲಿ ಹೇಳಿದ್ರು.
ಹೀಗಾಗಿ ದೇವೇಗೌಡರನ್ನು ಸಣ್ಣ ಸಮುದಾಯದ ಮತದಾರರು ಮರೆಯಬಾರದು ಎಂದರು. ಚಿತ್ರದುರ್ಗದಲ್ಲಿ ಯಾದವ ಸಮುದಾಯಕ್ಕೆ ಸೇರಿದ ನಿವೃತ್ತ ಅಧಿಕಾರಿ ಕೋದಂಡರಾಮಯ್ಯ, ಚಿಕ್ಕಬಳ್ಳಾಪುರದಲ್ಲಿ ಈಡೀಗ ಸಮಾಜಕ್ಕೆ ಸೇರಿದ ಆರ್.ಎಲ್ .ಜಾಲಪ್ಪ ಅವರಿಗೆ ಟಿಕೆಟ್ ನೀಡುವ ಮೂಲಕ ಸಂಸದರನ್ನಾಗಿ ಆಯ್ಕೆ ಮಾಡಿ, ಅಂದು ಲೋಕಸಭೆಗೆ ಹೆಚ್.ಡಿ.ದೇವೇಗೌಡರು ಕರೆದುಕೊಂಡು ಹೋದ್ರು. ದೇವೇಗೌಡರು ಕೇವಲ ಒಕ್ಕಲಿಗರ ಮತದಿಂದಲೇ ಗೆಲುವು ಸಾಧಿಸುತ್ತಾರೆ ಎಂಬುದು ದುರಹಂಕಾರದ ಮಾತು. ನಾಯಕ ಸಮುದಾಯದ ಮತಗಳು, ದಲಿತ ಬಂಧುಗಳ ಮತಗಳು, ಕುರುಬ ಮತ್ತು ಯಾದವ ಸಮುದಾಯದ ಮತಗಳು ಹಾಗೂ ಅವರೆಲ್ಲರ ಆಶೀರ್ವಾದ ಬೇಕಿದೆ ಎಂದರು.
ಇನ್ನು ದೇವೇಗೌಡರು ಪ್ರಧಾನಿಯಾಗಿದ್ದ ವೇಳೆ ಮುಸ್ಲಿಂ ಸಮುದಾಯದ ಸಿ.ಎಂ.ಇಬ್ರಾಹಿಂ ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ಮಾಡಿ, ಅವರಿಗೆ ಎರಡು ಪ್ರಮುಖ ಖಾತೆಗಳನ್ನು ನೀಡಿದ್ದರು. ನಾನು ಮುಖ್ಯಮಂತ್ರಿಯಾಗಿರುವ ಅವಧಿಯಲ್ಲಿ ಮೂರು ವಿಧಾನಸಭೆ ಅಧಿವೇಶನಳು ನಡೆದಿವೆ. ಆದರೆ ಚಿಕ್ಕನಾಯಕನಹಳ್ಳಿ ಬಿಜೆಪಿ ಶಾಸಕ ಜಿ. ಮಾಧುಸ್ವಾಮಿ ಮಾತ್ರ ಒಮ್ಮೆಯೂ ವಿಧಾನಸಭೆಯಲ್ಲಿ ಚಿಕ್ಕನಾಯಕನಹಳ್ಳಿ ಕ್ಷೇತ್ರಕ್ಕೆ ಕುಡಿಯುವ ನೀರಿನ ಸಮಸ್ಯೆ ಕುರಿತು ಪ್ರಸ್ತಾಪ ಮಾಡಿಲ್ಲ.
ಕೇವಲ ರಾಜ್ಯದ ಮೈತ್ರಿ ಸರ್ಕಾರವನ್ನು ಬೀಳಿಸಬೇಕೆಂಬ ಹುನ್ನಾರದಲ್ಲಿ ತೊಡಗಿದ್ದಾರೆ. ಅವರ ಕ್ಷೇತ್ರದ ನೀರಾವರಿ ಯೋಜನೆಗಳ ಕುರಿತು ವಿಧಾನಸಭೆಯಲ್ಲಿ ಚಕಾರ ಎತ್ತಲಿಲ್ಲ ಎಂದು ಪರೋಕ್ಷವಾಗಿ ಕಿಡಿಕಾರಿದರು. ಹೀಗಾಗಿ ಇವರಿಂದ ನಾನು ತುಮಕೂರಿಗೆ ನೀರು ತಂದು ಕೊಡಬೇಕೆಂಬ ಪಾಠವನ್ನು ಕಲಿತುಕೊಳ್ಳಬೇಕಿಲ್ಲ ಎಂದು ಮಾಧುಸ್ವಾಮಿಗೆ ಟಾಂಗ್ ನೀಡಿದರು.