ತುಮಕೂರು: ಭೂ ಸುಧಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆ ಮತ್ತು ಕಾರ್ಮಿಕ ಕಾಯ್ದೆಗೆ ತಿದ್ದುಪಡಿ ಮಾಡಿರುವುದನ್ನು ವಿರೋಧಿಸಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ನೇತೃತ್ವದಲ್ಲಿ ತುಮಕೂರು ಜಿಲ್ಲಾಧಿಕಾರಿ ಕಚೇರಿ ಎದುರು ನಾಳೆ ಧರಣಿ ನಡೆಸಲಾಗುವುದು ಎಂದು ಶಾಸಕ ಗೌರಿಶಂಕರ್ ತಿಳಿಸಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತುಮಕೂರು ಜಿಲ್ಲಾ ಜೆಡಿಎಸ್ ಘಟಕದಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಈ ಕಾಯ್ದೆಗಳ ತಿದ್ದುಪಡಿ ಮಾಡಿರುವುದನ್ನು ಸಂಪೂರ್ಣ ವಿರೋಧಿಸಲಾಗುವುದು. ಗುರುವಾರ ಬೆಳಗ್ಗೆ 11 ಗಂಟೆಗೆ ದೇವೇಗೌಡರು ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷರಾದ ಹೆಚ್.ಕೆ. ಕುಮಾರಸ್ವಾಮಿ ಧರಣಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಇದರಲ್ಲಿ ಯಾವುದೇ ರೀತಿಯ ರಾಜಕೀಯ ಇಲ್ಲ, ಬದಲಾಗಿ ರಾಜ್ಯದಲ್ಲಿಯೇ ರೈತರಿಗೆ ಒಂದು ರೀತಿ ಮರಣಶಾಸನ ಬರೆಯುವಂತಹ ಕಾಯ್ದೆಗಳಾಗಿವೆ. ಹೀಗಾಗಿ ನಿರಂತರವಾಗಿ ರೈತ ಪರವಾದ ನಿಲುವನ್ನು ಹೊಂದಿರುವ ಜೆಡಿಎಸ್ ಪಕ್ಷವು ಈ ಕಾಯ್ದೆಗಳನ್ನು ವಾಪಸ್ ಪಡೆಯಬೇಕೆಂದು ಆಗ್ರಹಿಸುತ್ತಿದೆ ಎಂದಿದ್ದಾರೆ.
ವಿಧಾನಸಭೆಯಲ್ಲಿಯು ಕೂಡ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಇದರ ವಿರುದ್ಧ ಹೋರಾಟ ರೂಪಿಸಲಾಗುವುದು. ಜಿಲ್ಲಾಧಿಕಾರಿ ಕಚೇರಿ ಎದುರು ನಡೆಯುವ ಪ್ರತಿಭಟನೆಯಲ್ಲಿ ಸಾಮಾಜಿಕ ಅಂತರ ಪಾಲಿಸಿಕೊಂಡು, ಮಾಸ್ಕ್ಗಳನ್ನು ಕಡ್ಡಾಯವಾಗಿ ಧರಿಸಿ ಕಾರ್ಯಕರ್ತರು ಹಾಗೂ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದು ಶಾಸಕ ಗೌರಿಶಂಕರ್ ತಿಳಿಸಿದರು.