ತುಮಕೂರು: ರಾಜ್ಯದಲ್ಲಿ ಇನ್ಮುಂದೆ ವಸತಿ ಶಾಲೆಗಳ ಪ್ರವೇಶಾತಿಯಲ್ಲಿ ಶೇ 25ರಷ್ಟು ಸೀಟುಗಳನ್ನ ಸ್ಥಳೀಯ ಮಕ್ಕಳಿಗೆ ಮೀಸಲಿಡಲು ತೀರ್ಮಾನಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ ತಿಳಿಸಿದ್ದಾರೆ.
ಸಿರಾ ತಾಲ್ಲೂಕು ಬುಕ್ಕಾಪಟ್ಟಣ ಹೋಬಳಿಯ ರಂಗನಾಥಪುರದಲ್ಲಿ ಪರಿಶಿಷ್ಟ ವರ್ಗಗಳ ಇಲಾಖೆಯ ವಸತಿ ಶಾಲಾ ಸಮುಚ್ಚಯ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಯಡಿಯೂರಪ್ಪ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸುಮಾರು 135 ವಸತಿ ಶಾಲೆಗಳನ್ನ ಪ್ರಾರಂಭಿಸಲಾಗಿದೆ. ಈ ವಸತಿ ಶಾಲೆಗಳಿರುವ ಗ್ರಾಮಗಳ ಮಕ್ಕಳಿಗೆ ಇದುವರೆಗೂ ಪ್ರವೇಶಕ್ಕೆ ಅವಕಾಶ ಕಲ್ಪಿಸಿರಲಿಲ್ಲ. ಕೇವಲ ವಸತಿ ಶಾಲೆಯನ್ನ ಹೊರಗಿನಿಂದ ನೋಡಿ ಸಮಾಧಾನ ಪಡಬೇಕಾಗಿತ್ತು.
ಆದರೆ, ಇನ್ಮುಂದೆ ವಸತಿ ಶಾಲೆಗಳಿರುವ ತಾಲೂಕಿನ ಸ್ಥಳೀಯ ಮಕ್ಕಳಿಗೆ ಶೇ 25ರಷ್ಟು ಸೀಟುಗಳನ್ನ ನೀಡಲು ನಿರ್ಧರಿಸಲಾಗಿದೆ. ವಸತಿ ಶಾಲೆಗಳು ಇರುವ ಗ್ರಾಮಗಳಲ್ಲಿ ಸ್ಥಳೀಯ ಮಕ್ಕಳು ಕೇವಲ ಕಟ್ಟಡ ನೋಡಿ ಸಂತೋಷ ಪಡಬಾರದು. ಈ ವಸತಿ ಶಾಲೆಯ ಸೌಲಭ್ಯ ಸ್ಥಳೀಯ ಮಕ್ಕಳಿಗೂ ಸಿಗುವಂತಾಗಬೇಕು ಎಂಬ ಉದ್ದೇಶದಿಂದ ಈ ನಿರ್ಧಾರ ತೆಗಡದುಕೊಳ್ಳಲಾಗಿದೆ. ಸ್ಥಳೀಯ ಮಕ್ಕಳು ಸ್ಪರ್ಧಾತ್ಮಕ ಪರೀಕ್ಷೆ ಬರೆದು ಉತ್ತೀರ್ಣರಾಗಿ, ಸರ್ಕಾರ ಒದಗಿಸಿರುವ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಬಡವರ ಮಕ್ಕಳು ವ್ಯಾಸಂಗ ಮಾಡಲು ಉತ್ತಮ ಮೂಲಭೂತ ಸೌಕರ್ಯ ಇರುವಂತಹ ಕಟ್ಟಡ ಇರಬೇಕು. ವಾಸಕ್ಕೆ ಉತ್ತಮ ವಾತಾವರಣ ಇರಬೇಕು ಎನ್ನುವ ಕಾರಣಕ್ಕೆ ನೂತನವಾಗಿ ವಸತಿ ಶಾಲೆಗಳ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ಸದ್ಯ, ಬಾಡಿಗೆ ಕಟ್ಟಡದಲ್ಲಿ ನಡೆಸುತ್ತಿರುವ ವಸತಿ ಶಾಲೆಗಳಲ್ಲಿ ಶೌಚಾಲಯ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳಿಲ್ಲದೆ, ಮಕ್ಕಳು ಪರದಾಡುತ್ತಿದ್ದಾರೆ. ಹಾಗಾಗಿ ಸರ್ಕಾರದ ವತಿಯಿಂದಲೇ ಸ್ವಂತ ಕಟ್ಟಡವನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದರು.
ಇನ್ನು, ಸಮಾಜ ಕಲ್ಯಾಣ ಇಲಾಖೆಯಡಿ ಸುಮಾರು 4 ಲಕ್ಷ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ವಸತಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳು ರಾಜ್ಯದಲ್ಲಿ ಶೇ. 96ರಷ್ಟು ಫಲಿತಾಂಶ ಪಡೆದು ಮುಂದಿದ್ದಾರೆ. ಎಲ್ಲರೂ ಹೆಚ್ಚು ಅಂಕ ಪಡೆದು ಉತ್ತೀರ್ಣರಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.