ತುಮಕೂರು: ವಿಜಯದಶಮಿ ಹಿನ್ನೆಲೆಯಲ್ಲಿ ಜಿಲ್ಲೆಯ ತಿಪಟೂರು ತಾಲೂಕಿನ ದಸರಿಘಟ್ಟ ಗ್ರಾಮದ ಶ್ರೀ ಚೌಡೇಶ್ವರಿ ಅಮ್ಮನವರ ದೇವಾಲಯದಲ್ಲಿ ಮುಳ್ಳು ಗದ್ದಿಗೆ ಉತ್ಸವ ಸಂಭ್ರಮದಿಂದ ನೆರವೇರಿತು.
ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧಿಪತಿ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಮುಳ್ಳು ಗದ್ದಿಗೆ ಉತ್ಸವಕ್ಕೆ ಶಾಸ್ತ್ರೋಕ್ತವಾಗಿ ವಿಧಿವಿಧಾನದಂತೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಬಳಿಕ ದೇವಿಯ ಪಲ್ಲಕ್ಕಿ ಹೊತ್ತ ದೇಗುಲದ ಸಿಬ್ಬಂದಿ ರಾಶಿರಾಶಿ ಮುಳ್ಳುಗಳನ್ನು ಹಾಕಲಾಗಿದ್ದ ಗದ್ದುಗೆ ಮೇಲೆ ನಡೆದುಕೊಂಡು ಹೋದರು.
ಈ ವೇಳೆ ಶಿಕ್ಷಣ ಸಚಿವ ಬಿ.ಸಿ. ನಾಗೇಶ್, ಶ್ರೀ ಚಂದ್ರಶೇಖರನಾಥ ಸ್ವಾಮೀಜಿ ಹಾಗೂ ವಿವಿಧ ಶಾಖಾ ಮಠದ ಶ್ರೀಗಳು ಸೇರಿದಂತೆ ಶ್ರೀ ಚೌಡೇಶ್ವರಿ ದೇವಾಲಯ ಟ್ರಸ್ಟಿಗಳು, ರಾಜ್ಯದ ವಿವಿಧೆಡೆಯಿಂದ ಆಗಮಿಸಿದ ಚೌಡೇಶ್ವರಿ ಅಮ್ಮನವರ ಭಕ್ತಾದಿಗಳು ಮುಳ್ಳು ಗದ್ದಿಗೆ ಉತ್ಸವದಲ್ಲಿ ಪಾಲ್ಗೊಂಡರು.