ತುಮಕೂರು : ಸಹಾಯ ಮಾಡುವ ನೆಪದಲ್ಲಿ ವೃದ್ಧೆಯೊಬ್ಬರನ್ನು ಪರಿಚಯ ಮಾಡಿಕೊಂಡು ಮನೆಗೆ ನುಗ್ಗಿ ದರೋಡೆ ಮಾಡಿದ್ದ ನಾಲ್ವರು ಆರೋಪಿಗಳನ್ನು ಹುಲಿಯೂರುದುರ್ಗ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶರತ್, ಶಿವರಾಜು, ವಸಂತಕುಮಾರ್, ಅಲೀಶಾ ಬಾಬು ಬಂಧಿತರು.
ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಸಂತೆ ಮಾವತ್ತೂರು ಗ್ರಾಮದಲ್ಲಿ ಘಟನೆ ನಡೆದಿತ್ತು. ಕಳೆದ ವಾರ ಚಿಕ್ಕಮ್ಮ ಎಂಬ ವೃದ್ಧೆಯನ್ನು ಪರಿಚಯ ಮಾಡಿಕೊಂಡ ಖದೀಮರು ಬಳಿಕ ವೃದ್ಧೆಯನ್ನು ಕಟ್ಟಿಹಾಕಿ 54 ಸಾವಿರ ರೂ. ನಗದು ಮತ್ತು 50 ಗ್ರಾಂ ಬಂಗಾರ ದೋಚಿ ಬೆಂಗಳೂರಿಗೆ ಪರಾರಿಯಾಗಿದ್ದರು.
ಇದನ್ನೂ ಓದಿ : ದಾವಣಗೆರೆಯಲ್ಲಿ ಮನೆ ಬಾಗಿಲು ಒಡೆದು ಕಳ್ಳತನ.. 6 ಜನ ಆರೋಪಿಗಳ ಬಂಧನ, 25 ಲಕ್ಷ ಮೌಲ್ಯದ ಚಿನ್ನಾಭರಣ ವಶ
ಎಟಿಎಂನ ಲಾಕರ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ ಶರತ್, ಕಳೆದ ವಾರ ಬ್ಯಾಂಕಿಗೆ ಬಂದಿದ್ದ ಚಿಕ್ಕಮ್ಮರನ್ನು ಪರಿಚಯ ಮಾಡಿಕೊಂಡಿದ್ದನು. ಈ ವೇಳೆ ವೃದ್ಧೆಯು ಶರತ್ ಬಳಿ ತನ್ನ ಎಲ್ಲಾ ಕಷ್ಟ ಸುಖಗಳನ್ನು ಹೇಳಿಕೊಂಡಿದ್ದರು. ಅಜ್ಜಿ ಒಬ್ಬಂಟಿಯಾಗಿರುವುದನ್ನು ಖಾತರಿಪಡಿಸಿಕೊಂಡಿದ್ದ ಆರೋಪಿ, ತನ್ನ ಸ್ನೇಹಿತರ ಜೊತೆ ಸೇರಿ ವೃದ್ಧೆಯ ಮನೆ ಮೇಲೆ ದಾಳಿ ಮಾಡಿ ನಗದು, ಬಂಗಾರ ಕದ್ದು ಪರಾರಿಯಾಗಿದ್ದರು. ಈ ಸಂಬಂಧ ದೂರು ದಾಖಲಾಗುತ್ತಿದ್ದಂತೆ ತೀವ್ರ ತನಿಖೆ ನಡೆಸಿದ ಕುಣಿಗಲ್ ಡಿವೈಎಸ್ ಪಿ ಲಕ್ಷ್ಮೀಕಾಂತ್ ನೇತೃತ್ವದ ಪೊಲೀಸರ ತಂಡ ಕೇವಲ 6 ದಿನದಲ್ಲಿ ಆರೋಪಿಗಳನ್ನ ಬಂಧಿಸಿದೆ. ಈ ಕುರಿತು ಹುಲಿಯೂರದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ : ಬಂಗಾರಪೇಟೆಯಲ್ಲಿ ವೃದ್ಧೆಯ ಕೊಲೆ : ಚಿನ್ನಾಭರಣಕ್ಕಾಗಿ ಪಕ್ಕದ ಮನೆಯ ಸ್ನೇಹಿತೆಯಿಂದಲೇ ಕೃತ್ಯ
6 ಮಂದಿ ಆರೋಪಿಗಳ ಬಂಧನ : ಮನೆ ಕಳ್ಳತನ ಮಾಡಿದ ಆರು ಮಂದಿ ಆರೋಪಿಗಳನ್ನು ದಾವಣಗೆರೆ ಪೊಲೀಸರು ಜುಲೈ 8 ರಂದು ಬಂಧಿಸಿ ಒಟ್ಟು 25,75,200 ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದರು. ಜೂನ್ 05 ರಂದು ನಗರದ ಡಾಲರ್ಸ್ ಕಾಲೋನಿ ಶಾಮನೂರು ನಿವಾಸಿ ತಿಪ್ಪೇಸ್ವಾಮಿ ಎಂಬುವರ ಮನೆಯಲ್ಲಿ ಕಳ್ಳತನವಾಗಿತ್ತು. ಮನೆಗೆ ಬೀಗ ಹಾಕಿ ಬೆಂಗಳೂರಿಗೆ ಹೋಗಿದ್ದ ತಿಪ್ಪೇಸ್ವಾಮಿ ಕುಟುಂಬ ಜೂ. 08 ಕ್ಕೆ ವಾಪಸ್ ಹಿಂದಿರುಗಿದಾಗ ಘಟನೆ ಬೆಳಕಿಗೆ ಬಂದಿತ್ತು.
ಶಿವರಾಜ ಲಮಾಣಿ ಅಲಿಯಾಸ್ ರಾಜಿ (26) ,ಮಾರುತಿ (25), ಸುನೀಲ್ ಬಿ ಲಮಾಣಿ(22), ಮನೋಜ್ ಡಿ ಲಮಾಣಿ (25), ಅಭಿಷೇಕ್ ಅಲಿಯಾಸ್ ಅಭಿ (22), ಮಾಲತೇಶ್(25) ಎಂಬುವರನ್ನು ವಿದ್ಯಾನಗರ ಠಾಣೆ ಪೊಲೀಸರು ಬಂಧಿಸಿದ್ದರು. ಬಂಧಿತರಿಂದ ಕಳ್ಳತನವಾಗಿದ್ದ 23,35,200 ರೂ. ಬೆಲೆ ಬಾಳುವ 417 ಗ್ರಾಂ ಬಂಗಾರದ ಆಭರಣ, 60,000 ರೂ. ಬೆಲೆ ಬಾಳುವ 328 ಗ್ರಾಂ ಬೆಳ್ಳಿಯ ಆಭರಣ ಮತ್ತು ಕೃತ್ಯಕ್ಕೆ ಬಳಸಿದ್ದ 1,80,000 ರೂ. ಬೆಲೆ ಬಾಳುವ 02 ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿತ್ತು.
ಇದನ್ನೂ ಓದಿ : ಬೆಳ್ತಂಗಡಿಯಲ್ಲಿ ವೃದ್ಧೆ ಹತ್ಯೆಗೈದು ನಗದು, ಚಿನ್ನ ದರೋಡೆ : ಆರೋಪಿ ಅರೆಸ್ಟ್