ತುಮಕೂರು: ಕೋವಿಡ್ ನಿಯಂತ್ರಣಕ್ಕೆ ಜಿಲ್ಲೆಯಲ್ಲಿ ಜಾರಿಗೊಳಿಸಲಾಗಿದ್ದ ಲಾಕ್‌ಡೌನ್ ಫಲ ಕೊಟ್ಟಿದ್ದು, ಸೋಂಕಿತರ ಸಂಖ್ಯೆಯಲ್ಲಿ ಭಾರೀ ಇಳಿಕೆ ಕಂಡಿದೆ. ಪರಿಣಾಮ ಕೋವಿಡ್ ರೆಡ್ ಝೋನ್ ಮತ್ತು ಹಾಟ್ ಸ್ಪಾಟ್ಗಳ ಸಂಖ್ಯೆಯೂ ಕಡಿಮೆಯಾಗಿದೆ.
ಜೂನ್ 1ರಂದು 128 ಕೊರೊನಾ ಹಾಟ್ ಸ್ಪಾಟ್ಗಳು ಮತ್ತು 30 ರೆಡ್ ಝೋನ್ಗಳನ್ನು ಗುರುತಿಸಲಾಗಿತ್ತು. ಆದರೆ, ಈಗ 56 ಹಾಟ್ ಸ್ಪಾಟ್ಗಳು ಮತ್ತು 8 ರೆಡ್ ಝೋನ್ಗಳಿವೆ. ಅದರಲ್ಲೂ, ಗುಬ್ಬಿ, ಕೊರಟಗೆರೆ, ಕುಣಿಗಲ್, ಮಧುಗಿರಿ, ಶಿರಾ ತಾಲೂಕುಗಳಲ್ಲಿ ರೆಡ್ ಝೋನ್ಗಳ ಸಂಖ್ಯೆ ಶೂನ್ಯವಾಗಿದೆ.
ತುರುವೇಕೆರೆಯಲ್ಲಿ 4, ತುಮಕೂರು, ತಿಪಟೂರು, ಪಾವಗಡ, ಚಿಕ್ಕನಾಯಕನಹಳ್ಳಿಯಲ್ಲಿ ತಲಾ ಒಂದು ಗ್ರಾಮಗಳು ರೆಡ್ ಝೋನ್ಗಳಾಗಿ ಉಳಿದುಕೊಂಡಿವೆ. ಇನ್ನೊಂದೆಡೆ ಶಿರಾ ತಾಲೂಕಿನ ಬುಕ್ಕಾ ಪಟ್ಟಣ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲೇ ಇದ್ದು, ಅಲ್ಲಿ ಸಂಪೂರ್ಣ ಲಾಕ್ ಡೌನ್ ಮಾಡಲಾಗಿದೆ.
ಪ್ರಸ್ತುತ ಜಿಲ್ಲೆಯಲ್ಲಿ ಶೇ. 62.48ರಷ್ಟು ಗ್ರಾಮಗಳು ಸೋಂಕು ಮುಕ್ತವಾಗಿವೆ. ಜಿಲ್ಲೆಯ 2,727 ಗ್ರಾಮಗಳ ಪೈಕಿ 1,704 ಗ್ರಾಮಗಳು ಕೊರೊನಾ ಸೋಂಕಿನಿಂದ ಮುಕ್ತವಾಗಿವೆ. 519 ಗ್ರಾಮಗಳಲ್ಲಿ ತಲಾ 1 ಪ್ರಕರಣಗಳಿವೆ. ಜೂನ್ 1ರಿಂದ ಜೂ.14ರವರೆಗೆ 14 ಅವಧಿಯಲ್ಲಿ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಇದ್ದ 7,354 ಸೋಂಕಿತರ ಸಂಖ್ಯೆ 3,157ಕ್ಕೆ ಇಳಿಕೆಯಾಗಿದೆ.
ಪ್ರಸ್ತುತ 4,197 ಸೋಂಕಿತರು ಗ್ರಾಮೀಣ ಭಾಗದಲ್ಲಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದ್ದು, ಹೋಂ ಐಸೋಲೇಷನ್ನಲ್ಲಿ ಇರುವವರನ್ನು ಕೋವಿಡ್ ಕೇರ್ ಸೆಂಟರ್ಗಳಿಗೆ ಸ್ಥಳಾಂತರಿಸಲಾಗುತ್ತಿದೆ. ಅಲ್ಲದೆ ಪ್ರಥಮ ಮತ್ತು ದ್ವಿತೀಯ ಸಂಪರ್ಕಿತರನ್ನು ಪತ್ತೆ ಹಚ್ಚಿ, ಅವರನ್ನೂ ಕೋವಿಡ್ ಕೇರ್ ಸೆಂಟರ್ಗಳಿಗೆ ಕಳುಹಿಸಲಾಗುತ್ತಿದೆ ಎಂದು ಜಿಲ್ಲಾ ಪಂಚಾಯತ್ ಸಿಇಒ ಡಾ. ಕೆ. ವಿದ್ಯಾಕುಮಾರಿ ತಿಳಿಸಿದ್ದಾರೆ.
ಇದನ್ನೂ ಓದಿ : ತುಮಕೂರಿನಲ್ಲಿ ಕೋವಿಡ್ ಪಾಸಿಟಿವಿಟಿ ಪ್ರಮಾಣ ಶೇ. 4.5ಕ್ಕೆ ಇಳಿಕೆ