ತುಮಕೂರು: ಜಿಲ್ಲೆಯಲ್ಲಿಂದು 15 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಸೋಂಕಿತರ ಸಂಖ್ಯೆ 73ಕ್ಕೆ ಏರಿಕೆಯಾಗಿದೆ.
14 ಮಂದಿ ಪುರುಷರು ಮತ್ತು ಓರ್ವ ಮಹಿಳೆಗೆ ಸೋಂಕು ತಗುಲಿದ್ದು, ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಂಗಳೂರಿನ ಕಾಮಾಕ್ಷಿಪಾಳ್ಯದಿಂದ ಜೂನ್ 14ರಂದು ಕಾರಿನಲ್ಲಿ ತುಮಕೂರಿಗೆ ಬಂದಿದ್ದ ಅಪ್ಪ, ಮಗನಿಗೆ ಸೋಂಕು ತಗುಲಿದೆ.
ತಿಪಟೂರಿನಲ್ಲಿ ಓರ್ವ ಪೌರಕಾರ್ಮಿಕನಿಗೆ ಹಾಗೂ ಆಂಧ್ರಪ್ರದೇಶದ ರಾಯದುರ್ಗದಿಂದ ಜೂ.22 ರಂದು ಸಿರಾ ತಾಲೂಕಿನ ಪಟ್ಟನಾಯಕನಹಳ್ಳಿಗೆ ಬಂದಿದ್ದ 43 ವರ್ಷದ ವ್ಯಕ್ತಿಯಲ್ಲೂ ಸೋಂಕು ದೃಢಪಟ್ಟಿದೆ. ರಾಯದುರ್ಗದಲ್ಲಿರುವ ಈತನ ಪತ್ನಿಯಲ್ಲೂ ಸೋಂಕು ಕಂಡುಬಂದಿದ್ದು, ಅವರು ಆಂಧ್ರಪ್ರದೇಶದಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಾಜಸ್ಥಾನದಿಂದ ಸಿರಾಗೆ ಬಂದಿದ್ದ 36 ವರ್ಷದ ಮಹಿಳೆಯಲ್ಲೂ ಸೋಂಕು ದೃಢವಾಗಿದ್ದು, ಈಕೆಯನ್ನ ಜೂ.21ರಂದು ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಬಳ್ಳಾರಿ ಜಿಲ್ಲೆ ಕೂಡ್ಲಿಗಿಯಿಂದ ಪಾವಗಡ ತಾಲೂಕು ಕನಿವೇನಹಳ್ಳಿಗೆ ಬಂದಿದ್ದ 43 ವರ್ಷದ ವ್ಯಕ್ತಿಗೂ ಸೋಂಕು ದೃಢಪಟ್ಟಿದೆ.
ಇನ್ನುಳಿದ ಏಳು ಮಂದಿಯ ಟ್ರಾವೆಲ್ ಹಿಸ್ಟರಿ ಪತ್ತೆ ಹಚ್ಚಲಾಗುತ್ತಿದೆ. ಈಗಾಗಲೇ 39 ಮಂದಿ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಮೂವರು ಮೃತಪಟ್ಟಿದ್ದಾರೆ.