ತುಮಕೂರು: ಬೆಂಗಳೂರಿನ ಪಾದರಾಯನಪುರದ ಕಂಟೇನ್ಮೆಂಟ್ ಏರಿಯಾದಿಂದ ಕದ್ದು ತುಮಕೂರು ಜಿಲ್ಲೆಯ ಸಿರಾ ಪಟ್ಟಣಕ್ಕೆ ಬಂದಿದ್ದ 45 ವರ್ಷದ ವ್ಯಕ್ತಿಯಲ್ಲಿ ಕೋವಿಡ್ 19 ಸೋಂಕು ಪತ್ತೆಯಾಗಿದೆ. ಪಿ.764 ಎಂದು ಗುರುತಿಸಲಾಗಿದ್ದು, ಈ ಮೂಲಕ ಜಿಲ್ಲೆಯಲ್ಲಿ 8ನೇ ಪ್ರಕರಣ ಪತ್ತೆಯಾದಂತಾಗಿದೆ.
ಸೋಂಕಿತನು ಬೆಂಗಳೂರಿನಲ್ಲಿ ಸೀಲ್ ಡೌನ್ ಆಗಿರುವ ಪಾದರಾಯಪುರ ಬಡಾವಣೆಯ ಬಿಬಿಎಂಪಿ ಕಂಟೇನ್ಮೆಂಟ್ ಜೋನ್ ವಾರ್ಡ್ ನಂ.135ರಿಂದ ಮೇ 4ರಂದು ರಾತ್ರಿ 7 ಗಂಟೆಗೆ ಸಿರಾಗೆ ತಪ್ಪಿಸಿಕೊಂಡು ಬಂದಿದ್ದ. ಪಾದರಾಯನಪುರದಲ್ಲಿನ ಹೋಟೆಲ್ವೊಂದರಲ್ಲಿ ಕೆಲಸ ಮಾಡುತ್ತಿದ್ದ ಸೋಂಕಿತನನ್ನು ಆತನ ಮಗ ಬೆಂಗಳೂರಿಗೆ ಹೋಗಿ ಸಿರಾ ಪಟ್ಟಣಕ್ಕೆ ಕರೆದುಕೊಂಡು ಬಂದಿದ್ದ.
ಮೇ 5ರಂದು ಈತನನ್ನು ಗುರುತಿಸಿದ ಕೊರೊನಾ ವಾರಿಯರ್ಸ್ ಈತನ ಗಂಟಲು ದ್ರವದ ಸ್ಯಾಂಪಲ್ ಪರೀಕ್ಷೆಗೆ ಕಳುಹಿಸಿದ್ದರು. ಇದೀಗ ಈತನಲ್ಲಿ ಇರುವುದು ಸೋಂಕು ದೃಢಪಟ್ಟಿದೆ. ಕಾರಿನಲ್ಲಿ ಸಿರಾ ಪಟ್ಟಣಕ್ಕೆ ಬಂದಿದ್ದನ ಎಂಬ ಮಾಹಿತಿ ಲಭ್ಯವಾಗಿದ್ದು, ಲಾಕ್ ಡೌನ್ ಇದ್ದರೂ ಈತ ಹೇಗೆ ಬೆಂಗಳೂರಿನಿಂದ ಸಿರಾಗೆ ಪ್ರಯಾಣ ಬೆಳೆಸಿದ್ದ ಎಂಬುದರ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾದಿಕಾರಿ ತನಿಖೆ ಆರಂಭಿಸಿದ್ದಾರೆ.
ಸಿರಾ ಪಟ್ಟಣದಲ್ಲಿ ಸೋಂಕಿತ ವ್ಯಕ್ತಿ ಬಂದಿದ್ದ ಪ್ರದೇಶವನ್ನು ಕಂಟೇನ್ಮೆಂಟ್ ಝೋನ್ ಎಂದು ಗುರುತಿಸಲಾಗಿದೆ.