ತುಮಕೂರು: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮಿತಿ ಮೀರುತ್ತಿದೆ. ಬಂದೋಬಸ್ತ್ ಕೆಲಸದಲ್ಲಿ ನಿರತರಾಗಿರುವ 80ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗೆ ಕೋವಿಡ್ ದೃಢಪಟ್ಟಿದೆ.
ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಉದೇಶ್, ಸಬ್ ಇನ್ಸ್ಪೆಕ್ಟರ್ಗಳು ಸೇರಿದಂತೆ 80ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗೆ ಸೋಂಕು ದೃಢಪಟ್ಟಿದೆ.
ಸೋಂಕಿಗೆ ಒಳಗಾಗಿರುವ ಪೊಲೀಸ್ ಸಿಬ್ಬಂದಿ ಬಹುಪಾಲು ತಮ್ಮ ಮನೆಗಳಲ್ಲಿಯೇ ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೋಂ ಕ್ವಾರಂಟೈನ್ ಆಗಿರುವ ಪೊಲೀಸ್ ಸಿಬ್ಬಂದಿ ಮತ್ತು ಅವರ ಕುಟುಂಬದವರೊಂದಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಂಶಿ ಕೃಷ್ಣ ನಿರಂತರವಾಗಿ ಸಂಪರ್ಕದಲ್ಲಿದ್ದು, ಧೈರ್ಯ ತುಂಬುತ್ತಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 11,872 ಮಂದಿ ಸೋಂಕಿತರಿದ್ದು, ಸರ್ಕಾರಿ ಮತ್ತು ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಂದೇ ದಿನ 1,748 ಮಂದಿ ಸೋಂಕಿತರು ಪತ್ತೆಯಾಗಿದ್ದಾರೆ. ಅದರಲ್ಲಿ ತುಮಕೂರು ತಾಲೂಕಿನಲ್ಲಿಯೇ ಅತಿ ಹೆಚ್ಚು 974 ಮಂದಿ ಸೋಂಕಿತರು ಪತ್ತೆಯಾಗಿದ್ದಾರೆ. ತಿಪಟೂರಿನಲ್ಲಿ 182 ಮಂದಿ ಕೊರೊನಾಗೆ ತುತ್ತಾಗಿದ್ದಾರೆ.
ಸೋಂಕಿನಿಂದ 9 ಮಂದಿ ಮೃತಪಟ್ಟಿದ್ದಾರೆ. ತುಮಕೂರು ತಾಲೂಕಿನಲ್ಲಿ ಮೂವರು, ಮಧುಗಿರಿ ತಾಲೂಕಿನಲ್ಲಿ ಇಬ್ಬರು, ಪಾವಗಡ ತಾಲೂಕಿನಲ್ಲಿ 2, ಶಿರಾ ಮತ್ತು ಕೊರಟಗೆರೆ ತಾಲೂಕಿನಲ್ಲಿ ತಲಾ ಓರ್ವ ಮೃತಪಟ್ಟಿದ್ದಾರೆ. ಏಪ್ರಿಲ್ 25ರಿಂದ ಇದುವರೆಗೆ 37 ಮಂದಿ ಸೋಂಕಿನಿಂದ ಅಸುನೀಗಿದ್ದಾರೆ.