ತುಮಕೂರು: ಜಿಲ್ಲೆಯಲ್ಲಿ ಕೊರೊನಾ ಸೋಂಕಿತ ಸಹೋದರರಿಂದ ಶಿರಾ ನಗರದ 32 ವರ್ಷದ ವ್ಯಕ್ತಿಯೊಬ್ಬರು ಸೋಂಕಿಗೆ ಒಳಗಾಗಿದ್ದಾರೆ.
ಭದ್ರಾವತಿ ಮೂಲದವರಾದ ಈ ವ್ಯಕ್ತಿಗೆ ಸೋಂಕಿತ ಸಹೋದರರಾದ ಪಿ.5813 ಮತ್ತು ಪಿ.6400 ಅವರಿಂದ ಸೋಂಕು ತಗುಲಿರುವುದು ದೃಢಪಟ್ಟಿದೆ.
ಸೋಂಕಿತ ಸಹೋದರರ ಸ್ಟೀಲ್ ಸಾಮಗ್ರಿಗಳ ಅಂಗಡಿಗೆ ಈ 32 ವರ್ಷದ ವ್ಯಕ್ತಿ ಜೂನ್ 9ರಂದು ಹೋಗಿದ್ದರು. ಅಲ್ಲಿ ಪಿ.5813ಯನ್ನು ಮೂರು ಬಾರಿ ಸಂಪರ್ಕಿಸಿದ್ದರಂತೆ. ನಂತರ ವೈದ್ಯಕೀಯ ಸಿಬ್ಬಂದಿ ಈ ವ್ಯಕ್ತಿಯನ್ನು ಕ್ವಾರಂಟೈನ್ ಮಾಡಿದ್ದರು.
ಆದರೆ ಜೂನ್ 12ರಂದು 32 ವರ್ಷದ ವ್ಯಕ್ತಿಯ ಗಂಟಲು ದ್ರವ ಪರೀಕ್ಷೆ ನಡೆಸಿ ಸ್ಯಾಂಪಲ್ ತೆಗೆದು ತುಮಕೂರಿನ ಕೋವಿಡ್-19 ಪರೀಕ್ಷಾ ಕೇಂದ್ರಕ್ಕೆ ಪರೀಕ್ಷೆಗಾಗಿ ಕಳುಹಿಸಲಾಗಿತ್ತು. ನಂತರ ಜೂನ್ 15ರಂದು ಸೋಂಕು ಇರುವುದು ದೃಢವಾಗಿದ್ದರಿಂದ ತಕ್ಷಣ ಆತನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಇದೀಗ ಈತನನ್ನು ಪಿ.7272 ಎಂದು ಗುರುತಿಸಲಾಗಿದೆ.
ಇನ್ನೊಂದೆಡೆ ಜಿಲ್ಲಾ ಕೋವಿಡ್-19 ಆಸ್ಪತ್ರೆಯಿಂದ ಇಬ್ಬರು ಪಿ.2922, ಪಿ.4860 ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 42ಕ್ಕೆ ಏರಿದೆ. ಇದರಲ್ಲಿ 31 ಮಂದಿ ಈಗಾಗಲೇ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇಬ್ಬರು ಮೃತಪಟ್ಟಿದ್ದಾರೆ.
9 ಮಂದಿ ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 171 ಮಂದಿಯನ್ನು ಜಿಲ್ಲೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಇದುವರೆಗೂ ಜಿಲ್ಲೆಯಲ್ಲಿ 12553 ಮಂದಿಯಲ್ಲಿ ಗಂಟಲು ದ್ರವದ ಸ್ಯಾಂಪಲ್ಗಳನ್ನು ತೆಗೆಯಲಾಗಿದ್ದು, 11,849 ಮಂದಿಗೆ ನೆಗೆಟಿವ್ ವರದಿ ಬಂದಿದೆ.
ಇಂದು ಒಂದೇ ದಿನ 453 ಮಂದಿಯ ಸ್ಯಾಂಪಲ್ಗಳನ್ನು ತೆಗೆಯಲಾಗಿದೆ. ಇನ್ನೂ 576 ಮಂದಿಯ ಸ್ಯಾಂಪಲ್ಗಳ ಪರೀಕ್ಷಾ ವರದಿ ನಿರೀಕ್ಷೆಯಲ್ಲಿ ಜಿಲ್ಲಾಡಳಿತವಿದೆ.