ತುಮಕೂರು : ಗುಬ್ಬಿ ಜೆಡಿಎಸ್ ಶಾಸಕ ಹಾಗೂ ಮಾಜಿ ಸಚಿವ ಎಸ್ ಆರ್ ಶ್ರೀನಿವಾಸ್ ಕಾಂಗ್ರೆಸ್‌ನತ್ತ ಮುಖ ಮಾಡಲಿದ್ದಾರೆಯೇ.. ಅದಕ್ಕೆ ಪುಷ್ಠಿ ಅನ್ನೋವಂತೆ ಇವತ್ತು ಅವರು ಕಾಂಗ್ರೆಸ್ ಮುಖಂಡ ಕೆ ಎನ್ ರಾಜಣ್ಣ ಅವರ ಮನೆಯಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು.
ಮಾಧ್ಯಮಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡ ಕೆ ಎನ್ ರಾಜಣ್ಣ ಅವರು, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಟೀಕಿಸಿದರು. ಅಲ್ಲದೆ ಸಿದ್ದರಾಮಯ್ಯ ಅವರ ಪರ ಮಾತನಾಡಿದ್ರೂ ಜೆಡಿಎಸ್ ಶಾಸಕ ಎಸ್ ಆರ್ ಶ್ರೀನಿವಾಸ್ ಮಾತ್ರ ತನಗೂ ಇದಕ್ಕೂ ಸಂಬಂಧವೇ ಇಲ್ಲದಂತೆ ಮೌನಕ್ಕೆ ಶರಣಾಗಿದ್ದರು.
ಮಾಧ್ಯಮಗೋಷ್ಠಿಯ ನಂತರ ಮಾತನಾಡಿದ ಶ್ರೀನಿವಾಸ್, ನಾನು ಈಗ ಜೆಡಿಎಸ್‌ನಲ್ಲಿದ್ದೇನೆ. ಮುಂದಿನ ಚುನಾವಣೆ ವೇಳೆಗೆ ಎಲ್ಲಿ ಇರುತ್ತೇನೋ, ಇಲ್ಲವೋ ನೋಡೋಣ ಎಂದರು. ಬಿಜೆಪಿ ಜತೆ ಕುಮಾರಸ್ವಾಮಿ ಹೋದ್ರೂ ನಾವು ಹೋಗುವುದಿಲ್ಲ. ಅಧಿಕಾರದ ಬಗ್ಗೆ ಪ್ರೀತಿ ಇರುವವರು ಬಿಜೆಪಿ ಬಗ್ಗೆ ಒಲವು ಹೊಂದುತ್ತಾರೆ.
ನನಗೆ ಬಿಜೆಪಿ ಬಗ್ಗೆ ಒಲವು ಇಲ್ಲ. ಅವರು ಬಿಜೆಪಿ ಜತೆ ಹೋದರೆ ನಾನು ದೂರವಾಗುತ್ತೇನೆ. ಬಿಜೆಪಿ ಪಕ್ಷದ ನಿಲುವುಗಳ ಬಗ್ಗೆ ನನ್ನ ವಿರೋಧವಿದೆ ಎಂದು ಹೇಳಿದರು. ಮುಂದಿನ ವಿಧಾನಸಭೆ ಚುನಾವಣೆ ವೇಳೆ ನನ್ನ ಬೆಂಬಲಿಗರ ಸಭೆ ನಡೆಸಿ ತೀರ್ಮಾನ ಕೈಗೊಳ್ಳುವೆ ಎಂದರು.
ಇತ್ತೀಚಿಗೆ ನಡೆದ ಶಿರಾ ಉಪಚುನಾವಣೆ ಯಾವ ರೀತಿ ಮಾಡಬೇಕು ಎಂದು ಮುಖಂಡರಿಗೆ ಹೇಳಿದೆ. ಆದರೆ, ಮುಖಂಡರು 15 ದಿನ ಸುಮ್ಮನಿದ್ದು, ನಂತರ ಚುನಾವಣೆ ಗೆಲ್ಲಿ ಎಂದರು. ಈ ರೀತಿ ಚುನಾವಣೆ ಗೆಲ್ಲಲು ಸಾಧ್ಯವೇ ಎಂದು ಜೆಡಿಎಸ್ ನಾಯಕರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಜೆಡಿಎಸ್ ತೊರೆಯುವಿರಾ ಎನ್ನುವ ಪ್ರಶ್ನೆಗೆ 'ಇಲ್ಲ ನಾನು ಜೆಡಿಎಸ್‌ನಲ್ಲಿಯೇ ಇರುವೆ' ಎಂದರು. ನನಗೆ ಕೆ ಎನ್ ರಾಜಣ್ಣ ಅವರು ಗಾಢ್‌ಪಾದರ್. ಇದು ರಾಜಕೀಯ ಸುದ್ದಿಗೋಷ್ಠಿ ಅಲ್ಲ. ರಾಜಣ್ಣ ಕರೆದಿದ್ದಾರೆ ಬಂದೆ ಎಂದರು.
ಇದನ್ನು ಓದಿ :ಟೊಯೋಟಾ ಕಿರ್ಲೋಸ್ಕರ್ ಕಾರ್ಮಿಕರ ಮುಷ್ಕರ: ಸರ್ಕಾರದ ಮಧ್ಯಪ್ರವೇಶಕ್ಕೆ ಹೆಚ್ಡಿಕೆ ಆಗ್ರಹ
ಜೆಡಿಎಸ್ ಮುಖಂಡರು ಬಿಜೆಪಿ ಜೊತೆಗೆ ಹೋದರೆ ಪಕ್ಷ ಬಿಡುತ್ತೇನೆ. ನೂರಕ್ಕೆ ನೂರಷ್ಟು ಪಕ್ಷದಲ್ಲಿ ಇರಲ್ಲ. ಮುಂದೆ ಪಕ್ಷದ ಕಾರ್ಯಕರ್ತರನ್ನು ಸಭೆ ನಡೆಸಿ ನಿರ್ಧಾರ ಮಾಡುತ್ತೇನೆ ಎಂದರು. ನಾನು ಅಧಿಕಾರದ ಹಿಂದೆ ಹೋಗಿದ್ದರೆ ನಾನು ಉಸ್ತುವಾರಿ ಸಚಿವನಾಗುತ್ತಿದ್ದೆ. ನಾನು ವಾಮಮಾರ್ಗದಲ್ಲಿ ಹೋಗಲ್ಲ. ಕೆಲವರು ಬಿಜೆಪಿಗೆ ಹೋಗಬೇಕು ಅಂತಿದ್ದಾರೆ. ಕೆಲವರು ಬೇಡ ಅಂತಾರೆ ಎಂದರು.
ಕುಮಾರಸ್ವಾಮಿ ಬಿಜೆಪಿಗೆ ಹೋಗುವ ನಿರ್ಧಾರವನ್ನು ವಿರೋಧಿಸುತ್ತಾರೆ, ನಮ್ಮದೇ ಪಕ್ಷದ ಕೆಲ ಶಾಸಕರು ವಿರೋಧ ಮಾಡುತ್ತಾರೆ ಎಂದರು. ಬಿಜೆಪಿ ಜೊತೆ ಜೆಡಿಎಸ್ ಹೋದರೆ ಅನೇಕರು ಪಕ್ಷ ಬಿಡುತ್ತಾರೆ. ನಮ್ಮ ಪಕ್ಷ ಬಿಟ್ಟರೆ ಪೇಟ ತೊಡಿಸಿ ಕಳುಹಿಸುತ್ತೇನೆ ಎಂದಿದ್ದಾರೆ ಕುಮಾರಸ್ವಾಮಿ. ನಾನು ಪಕ್ಷ ತೊರೆದರೆ ಅವರು ತಲೆ ಕೆಡಿಸಿಕೊಳ್ಳಲ್ಲ. ಕೆಲ ಶಾಸಕರು ನನ್ನ ಜೊತೆಗೆ ಚರ್ಚೆ ಮಾಡಿದ್ದಾರೆ ಎಂದರು.