ತುಮಕೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿಯವರು ಅಪರಾಧಿಯಲ್ಲ, ಆರೋಪಿ ಮಾತ್ರ. ಆದರೆ, ಆರೋಪಿಯು ಅಪರಾಧಿಯೆಂದು ತೀರ್ಮಾನವಾಗುವುದು ತನಿಖೆಯ ನಂತರ ಎಂದು ಮಾಜಿ ಶಾಸಕ, ಕಾಂಗ್ರೆಸ್ ಮುಖಂಡ ಕೆ. ಎನ್. ರಾಜಣ್ಣ ಹೇಳಿದರು.
ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ರಮೇಶ್ ಜಾರಕಿಹೊಳಿ ಪ್ರಕರಣಗಳಂತೆ ಅನೇಕ ಪ್ರಕರಣಗಳು ನಡೆದಿವೆ. ಆದರೆ, ಈ ಪ್ರಕರಣಗಳು ಯಾವ ಹಂತ ತಲುಪಿವೆ ಎಂಬುದು ಗೊತ್ತಿಲ್ಲ. ನಾನು ರಮೇಶ್ ಜಾರಕಿಹೊಳಿ ಪರವಾಗಿದ್ದೇನೆ. ಸತೀಶ್, ಬಾಲಚಂದ್ರ, ಲಖನ್ ಜಾರಕಿಹೊಳಿ ಕುಟುಂಬದ ಎಲ್ಲರೂ ನನಗೆ ಗೊತ್ತಿದ್ದಾರೆ ಎಂದರು.
ರಾಜಕೀಯವಾಗಿ ಅಭಿವೃದ್ಧಿ ಹೊಂದಲು ಅವರು ಯಾವ ಯಾವ ಮಾರ್ಗಗಳನ್ನು ಅನುಸರಿಸುತ್ತಾರೆ ಎಂಬುದು ಅವರಿಗೆ ಬಿಟ್ಟದ್ದು. ರಮೇಶ್ ಜಾರಕಿಹೊಳಿಗೆ ಇಂತಹ ವಿಷಯಗಳು ಹೊಸದೇನಲ್ಲ. ಆದರೆ, ಇದರಲ್ಲಿ ಬೇರೆಯವರ ಹಸ್ತಕ್ಷೇಪ ನಡೆದಿರಬಹುದು. ಈ ಪ್ರಕರಣದಲ್ಲಿರುವ ಹುಡುಗಿ ಪತ್ತೆಯಾಗುತ್ತಿಲ್ಲ. ಒಬ್ಬ ಮಹಿಳೆಗೆ ಈ ರೀತಿ ರೆಕಾರ್ಡ್ ಮಾಡಿ ತಂದುಕೊಡುವಂತೆ ವ್ಯವಸ್ಥಿತ ಸಂಚು ರೂಪಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆ ನಡೆಯುತ್ತಿದೆ. ಇಂದಲ್ಲ ನಾಳೆ ವಿಷಯ ಬೆಳಕಿಗೆ ಬರುತ್ತದೆ ಎಂದು ತಿಳಿಸಿದರು.
ಇದನ್ನೂ ಓದಿ: ಅಣ್ಣನನ್ನು ರಾಜಕೀಯವಾಗಿ ಮುಗಿಸಲು ನಕಲಿ ಸಿಡಿ ಬಳಕೆ: ಲಖನ್ ಜಾರಕಿಹೊಳಿ
ಇದನ್ನು ಬಿಜೆಪಿಯವರೇ ಯಾಕೆ ಮಾಡಿರಬಾರದು? ಎಂದು ಸಂಶಯ ವ್ಯಕ್ತಪಡಿಸಿದ ಅವರು, ಎಲ್ಲವೂ ಇರುತ್ತದೆ. ತನಿಖೆಯಲ್ಲಿ ಬೆಳಕಿಗೆ ಬರುತ್ತೆ. ಸಾರ್ವಜನಿಕ ಜೀವನದಲ್ಲಿ ಇಂತಹ ಪ್ರಕರಣಗಳು ಬರುತ್ತವೆ. ಆದರೆ, ಅದನ್ನೇ ದೊಡ್ಡದೆಂದು ಬಿಂಬಿಸಬಾರದು ಎಂದರು.