ತುಮಕೂರು: ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿರುವ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಗೆಲುವಿಗೆ ಈಗಾಗಲೇ ಜಿಲ್ಲೆಯ ಪ್ರಭಾವಿ ಮುಖಂಡರು ಟೊಂಕ ಕಟ್ಟಿ ನಿಂತಿದ್ದಾರೆ.
ಬಹುತೇಕ ಕಾಂಗ್ರೆಸ್ ಮುಖಂಡರಲ್ಲಿ ಮನೆ ಮಾಡಿದ್ದ ಅಸಮಾಧಾನ ನಿವಾರಣೆ ಮಾಡಿದ್ದೇವೆ ಎಂಬ ಭಾವನೆ ಎರಡು ಪಕ್ಷದ ಮುಖಂಡರಲ್ಲಿ ಇದೆ. ಆದರೆ ಮಧುಗಿರಿ ಕ್ಷೇತ್ರದ ಕಾಂಗ್ರೆಸ್ ಮುಖಂಡ, ಮಾಜಿ ಶಾಸಕ ಕೆ.ಎನ್.ರಾಜಣ್ಣ ಮಾತ್ರ ಬಹಿರಂಗವಾಗಿ ಯಾವುದೇ ಸಭೆಗಳಲ್ಲಿ ಕಾಣಿಸಿಕೊಳ್ಳದೆ ದೇವೇಗೌಡರ ಪರವಾಗಿ ಕೆಲಸ ಮಾಡುವುದಿಲ್ಲ ಎಂಬ ಸಂದೇಶವನ್ನು ಸಾರಿದ್ದಾರೆ.
ಈಗಲೇ ಹೆಚ್.ಡಿ.ದೇವೇಗೌಡರು ಜಿಲ್ಲೆಯಲ್ಲಿ ಚುನಾವಣಾ ಉಸ್ತುವಾರಿಯನ್ನು ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ವಹಿಸಿಕೊಂಡಿದ್ದಾರೆ ಎಂದು ಪದೇ ಪದೇ ತಾವು ಇದುವರೆಗೂ ಭಾಗವಹಿಸಿರೋ 3 ಪ್ರಚಾರ ಸಭೆಗಳಲ್ಲಿ ಘೋಷಣೆ ಮಾಡಿದ್ದಾರೆ. ಲೋಕಸಭಾ ವ್ಯಾಪ್ತಿಯಲ್ಲಿ ಬರುವಂತಹ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಮತ್ತು ಜೆಡಿಎಸ್ ಜಂಟಿ ಪ್ರಚಾರ ಸಭೆಗಳನ್ನು ಒಂದು ಸುತ್ತು ನಡೆಸಿರುವಂತಹ ಪರಮೇಶ್ವರ್ ಮತ್ತು ಸಣ್ಣ ಕೈಗಾರಿಕೆ ಸಚಿವ ಎಸ್.ಆರ್. ಶ್ರೀನಿವಾಸ್ ಒಂದು ಹಂತದಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಯಶಸ್ವಿಯಾಗಿದ್ದಾರೆ ಎಂದು ನಂಬಿದ್ದಾರೆ.
ಹೀಗಿದ್ದರೂ ಕೂಡ ಅಲ್ಲಲ್ಲಿ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಅಸಮಾಧಾನ ಹೊಗೆಯಾಡುತ್ತಲೇ ಇದೆ. ಇದಕ್ಕೆ ಸಾಕ್ಷಿ ಎಂಬಂತೆ ಮಧುಗಿರಿ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಜಂಟಿ ಪ್ರಚಾರ ಸಭೆಯಲ್ಲಿ ಪ್ರಭಾವಿ ಕಾಂಗ್ರೆಸ್ ಮುಖಂಡ ಕೆ.ಎನ್. ರಾಜಣ್ಣ ಕಾಣಿಸಿಕೊಳ್ಳದೆ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರದಲ್ಲಿ ತೊಡಗಿಸಿಕೊಂಡಿರುವುದಾಗಿ ಹೇಳಿ ನುಣುಚಿಕೊಂಡಿದ್ದಾರೆ ಎನ್ನಲಾಗಿದೆ.
ನಾಯಕ ಜನಾಂಗದ ಮುಖಂಡರಾಗಿರುವ ಕೆ.ಎನ್.ರಾಜಣ್ಣ ಬಂಡಾಯ ಕಾಂಗ್ರೆಸ್ ಅಭ್ಯರ್ಥಿಯಾಗಿ ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದ್ದರು. ಹೈಕಮಾಂಡ್ ಸೂಚನೆ ಮೇರೆಗೆ ತಮ್ಮ ಉಮೇದುವಾರಿಕೆ ವಾಪಸ್ ಪಡೆದಿದ್ದರು. ಮಧುಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಸಹ ಹೆಚ್.ಡಿ. ದೇವೇಗೌಡ ಆಗಮಿಸಿದರೂ ಕೂಡ ರಾಜಣ್ಣ ಸಮೀಪವೂ ಸುಳಿಯಲಿಲ್ಲ.
ಪ್ರತ್ಯೇಕವಾಗಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆಸುವ ಮೂಲಕ ನಿರ್ಧಾರಕ್ಕೆ ಬರುವುದಾಗಿ ಹೇಳಿರುವ ರಾಜಣ್ಣ, ಅಲ್ಲಿ ಬೆಂಬಲಿಗರು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧರಾಗಿರುವುದಾಗಿ ಸಂದೇಶವನ್ನು ರವಾನಿಸಿದ್ದಾರೆ.
ಒಟ್ಟಾರೆ ಮಧುಗಿರಿ ವಿಧಾನಸಭೆ ಕ್ಷೇತ್ರವೊಂದರಲ್ಲಿ ಮಾತ್ರ ಕಾಂಗ್ರೆಸ್ ಮುಖಂಡರು ಬಂಡಾಯದ ಬಾವುಟ ಹಾರಿಸಿದ್ದಾರೆ. ಅದೇ ರೀತಿ ಒಳಗೊಳಗೆ ಮುಖಂಡರು ಮತ್ತು ಕಾರ್ಯಕರ್ತರಲ್ಲಿ ಮನೆ ಮಾಡಿರುವ ಅಸಮಾಧಾನವನ್ನು ಸಂಪೂರ್ಣವಾಗಿ ಶಮನ ಮಾಡುವಲ್ಲಿ ಕಾಂಗ್ರೆಸ್ ಮುಖಂಡರು ಯಶಸ್ವಿಯಾಗುವರೆ ಎಂಬುದು ಮಾತ್ರ ಯಕ್ಷ ಪ್ರಶ್ನೆಯಾಗಿದೆ.