ತುಮಕೂರು: ಚಿತ್ರನಟ ಚಿರಂಜೀವಿ ಸರ್ಜಾ ಅಕಾಲಿಕ ನಿಧನದಿಂದಾಗಿ ಸ್ವಂತ ಊರಾದ ಮಧುಗಿರಿ ತಾಲೂಕಿನ ಜಕ್ಕೇನಹಳ್ಳಿ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ಸರ್ಜಾ ಕುಟುಂಬದ ಸದಸ್ಯರು ಕಂಬನಿ ಮಿಡಿದಿದ್ದಾರೆ.
‘ಚಿರಂಜೀವಿ ಸರ್ಜಾ ಅವರು ತಮ್ಮ ಕುಟುಂಬಕ್ಕೆ ಮುದ್ದು ಮೊಮ್ಮಗನಾಗಿದ್ದರು. ಎಲ್ಲರೂ ಅವರನ್ನು ಪ್ರೀತಿಯಿಂದ ಕಾಣುತ್ತಿದ್ದರು. ಪ್ರತಿ ವರ್ಷ ಜಕ್ಕೇನಹಳ್ಳಿ ಗ್ರಾಮದ ಅಹೋಬಲ ಲಕ್ಷ್ಮಿನರಸಿಂಹಸ್ವಾಮಿ ರಥೋತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದ ಚಿರಂಜೀವಿ ಸರ್ಜಾ ಹಳ್ಳಿಯ ಜನರ ಜೊತೆ ಪ್ರೀತಿಯಿಂದ ಬೆರೆಯುತ್ತಿದ್ದರು. ಆಂಜನೇಯ ಸ್ವಾಮಿಯ ಪರಮಭಕ್ತರಾಗಿದ್ದರು. ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಮನೋಭಾವ ಹೊಂದಿದ್ದರು. ಆದರೆ ವಿಧಿ ಅವರನ್ನು ಇಷ್ಟು ಬೇಗ ಕರೆದುಕೊಂಡು ಹೋಗಿದ್ದು ನೋವು ತಂದಿದೆ’ ಎಂದು ಅರ್ಜುನ್ ಸರ್ಜಾ ಸಂಬಂಧಿ ರಾಮಕೃಷ್ಣ ತಿಳಿಸಿದ್ದಾರೆ.
ಈ ವರ್ಷ ಮಾರ್ಚ್ 11ರಂದು ದೇಗುಲಕ್ಕೆ ಭೇಟಿ ನೀಡಿದ್ದ ಅವರು ಪೂಜಾ ವಿಧಿ ವಿಧಾನಗಳಲ್ಲಿ ಪಾಲ್ಗೊಂಡು ಬಳಿಕ ತಮ್ಮ ಧ್ರುವ ಜೊತೆಗೂಡಿ ದೇವರ ಅಡ್ಡಪಲ್ಲಕ್ಕಿಯನ್ನು ಹೊತ್ತಿದ್ದರು. ಈ ಸಂದರ್ಭದಲ್ಲಿ ಅರ್ಜುನ್ ತಾಯಿ ಸಹ ಭಾಗಿಯಾಗಿದ್ದರು.