ತುಮಕೂರು: ಸಿಬಿಐ, ಇಡಿ ಹಾಗು ತೆರಿಗೆ ಇಲಾಖೆ ಸೇರಿದಂತೆ ಎಲ್ಲವನ್ನೂ ಕೇಂದ್ರ ಸರ್ಕಾರ ದುರುಪಯೋಗ ಮಾಡಿಕೊಳ್ಳುತ್ತಿದೆ. ಈ ಇಲಾಖೆಗಳು ರಾಜಕೀಯ ವಸ್ತುವಾಗಬಾರದು ಎಂದು ತಿರುವನಂತಪುರಂ ಕ್ಷೇತ್ರದ ಸಂಸದ ಶಶಿ ತರೂರ್ ಹೇಳಿದ್ದಾರೆ.
ತುಮಕೂರಿನಲ್ಲಿ ಬುಧವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸಿಬಿಐ, ಇಡಿ, ತೆರಿಗೆ ಇಲಾಖೆಗಳ ದಾಳಿ ಮತ್ತು ತನಿಖೆ ಕೇವಲ ವಿಪಕ್ಷಗಳ ಮುಖಂಡರ ವಿರುದ್ದವೇ ಆಗುತ್ತಿದೆ. ನಮ್ಮೆಲ್ಲರ ವಿರುದ್ಧ ಕೇಸ್ ಮಾಡಿಬಿಡಿ. ಸಿಬಿಐ, ಇಡಿ, ತೆರಿಗೆ ಇಲಾಖೆಯಂಥ ಅತ್ಯುನ್ನತ ಸಂಸ್ಥೆಗಳ ಮೇಲೆ ದೇಶದ ಜನರು ಅಪಾರ ನಂಬಿಕೆ ಇಟ್ಟುಕೊಂಡಿದ್ದಾರೆ. ಆದರೆ ಕೇಂದ್ರ ಇಂಥ ಉನ್ನತ ಸಂಸ್ಥೆಗಳನ್ನು ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿರುವುದು ಬೇಸರದ ಸಂಗತಿ. ಕೊನೆಯಲ್ಲಿ ಜನತೆಯೇ ಚುನಾವಣೆಯಲ್ಲಿ ನಿರ್ಧಾರ ಮಾಡುತ್ತಾರೆ ಎಂದರು.
ಡಿಕೆಶಿಗೆ ರಿಲೀಫ್ ವಿಚಾರ: ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ರಿಲೀಫ್ ಸಿಕ್ಕಿರುವುದು ತುಂಬಾ ಒಳ್ಳೆಯ ವಿಚಾರ. ನ್ಯಾಯಾಂಗ ಸ್ವತಂತ್ರವಾಗಿದೆ. ಪಂಚ ರಾಜ್ಯಗಳ ಚುನಾವಣೆಯ ಪೈಕಿ ಮಧ್ಯಪ್ರದೇಶ ಮತ್ತು ಛತ್ತೀಸ್‌ಘಡದಲ್ಲಿ ನಾವು ಮುಂದಿದ್ದೇವೆ. ತೆಲಂಗಾಣದಲ್ಲೂ ಕಾಂಗ್ರೆಸ್ ಪರ ಒಳ್ಳೆಯ ಫಲಿತಾಂಶ ಬರಲಿದೆ ಎಂದು ಹೇಳಿದರು.
ಮಿಜೋರಾಂನಲ್ಲಿ ನಾವು ದೊಡ್ಡ ಪಕ್ಷವಾಗಿ ಹೊರಹೊಮ್ಮುತ್ತೇವೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಉತ್ತಮ ಸಾಧನೆ ಮಾಡಲಿದೆ. ಕರ್ನಾಟಕದಲ್ಲಿ ದಲಿತ ಸಿಎಂ ಆಗಬೇಕು ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಏನೂ ಪ್ರತಿಕ್ರಿಯೆ ನೀಡಲ್ಲ. ಪಕ್ಷ ನಿರ್ಧಾರ ಮಾಡಲಿದೆ ಎಂದು ತಿಳಿಸಿದರು.
ಡಿ.ಕೆ.ಶಿವಕುಮಾರ್ ವಿರುದ್ಧದ ಸಿಬಿಐ ಪ್ರಕರಣದ ಕುರಿತು ಹೈಕೋರ್ಟ್ ತೀರ್ಪನ್ನು ಸ್ವಾಗತಿಸುತ್ತೇನೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದ್ದಾರೆ. ತುಮಕೂರಿನ ಸಿದ್ದಾರ್ಥ ಮೆಡಿಕಲ್ ಕಾಲೇಜಿನಲ್ಲಿ ನಡೆದ ಘಟಿಕೋತ್ಸವ ಕಾರ್ಯಕ್ರಮದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಅದು ಒಳ್ಳೆಯದಲ್ವಾ? ನಾವು ಅದನ್ನೇ ಬಯಸಿದ್ದೆವು. ಈ ಹಿಂದಿನ ಬಿಜೆಪಿ ಸರ್ಕಾರ ತಪ್ಪು ಮಾಡಿತ್ತು. ಸ್ಪೀಕರ್ ಅನುಮತಿ ಇಲ್ಲದೇ ಪ್ರಕರಣವನ್ನು ಸಿಬಿಐಗೆ ಕೊಟ್ಟಿದ್ದರು ಅಂತ ಕೇಸ್ ವಾಪಸ್ ಪಡೆದಿದ್ದೆವು. ಸದ್ಯ ಸರ್ಕಾರದ ಆದೇಶವನ್ನು ಹೈಕೋರ್ಟ್ಗೆ ಕಮ್ಯುನಿಕೇಟ್ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಡಿಕೆಶಿಗೆ ಒಳ್ಳೆಯದಾಗಲಿದೆ ಎಂದರು.
ಇದನ್ನೂ ಓದಿ: ಸಿಬಿಐಗೆ ತನಿಖೆಗೆ ನೀಡಿದ್ದ ಕ್ರಮವನ್ನು ಪ್ರಶ್ನಿಸಿದ್ದ ಮೇಲ್ಮನವಿ ಹಿಂಪಡೆದ ಡಿಕೆಶಿ; ಅನುಮತಿ ನೀಡಿದ ಹೈಕೋರ್ಟ್