ತುಮಕೂರು: 2018ರ ವಿಧಾನಸಭೆ ಚುನವಣೆ ಸಂದರ್ಭದಲ್ಲಿ ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ನಕಲಿ ಗ್ರೂಪ್ ಇನ್ಶೂರೆನ್ಸ್ಗಳನ್ನು ವಿತರಿಸಿದ ಆರೋಪದ ಮೇರೆಗೆ ಜೆಡಿಎಸ್ ಅಭ್ಯರ್ಥಿಯಾಗಿದ್ದ ಡಿ.ಸಿ. ಗೌರಿಶಂಕರ್, ನ್ಯೂ ಇಂಡಿಯಾ ಇನ್ಶೂರೆನ್ಸ್ ಕಂಪನಿಯ ಡಿವಿಜನಲ್ ಮ್ಯಾನೇಜರ್ ದೇವೇಂದ್ರ ಪ್ರಸಾದ್, ಮಾರುತಿ ಸೇವಾ ಸಂಸ್ಥೆಯ ಪದಾಧಿಕಾರಿಗಳು, ಕಿಶೋರ್, ಮೆಡಿ ಅಸಿಸ್ಟೆನ್ಸ್ ಕಂಪನಿಯ ಅಧಿಕಾರಿಗಳ ಮೇಲೆ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಮೇಶ್ ಬೆಟ್ಟಯ್ಯ ಎಂಬುವರು ಈ ಹಿಂದೆ ಪ್ರಧಾನ ಮಂತ್ರಿಗಳ ದೂರು ಸ್ವೀಕಾರ ಕೇಂದ್ರವಾದ ಇ-ಜನಸ್ಪಂದನೆ ಮತ್ತು ಮುಖ್ಯಮಂತ್ರಿಗಳಿಗೆ ನೀಡಿರುವ ದೂರು ಮತ್ತು ಲಗತ್ತಿರುವ ದಾಖಲಾತಿಗಳ ಆಧಾರವನ್ನು ಇಟ್ಟುಕೊಂಡು ಎಫ್ಐಆರ್ ದಾಖಲಿಸಲಾಗಿದೆ. ದೂರುದಾರರ ಆರೋಪದ ಮೇಲೆ 420,406,409, 465,468,471 ಐಪಿಸಿ ಸೆಕ್ಷನ್ ಅನ್ವಯ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.
ದೂರುದಾರರ ಪ್ರಕಾರ, 2018ರಲ್ಲಿ ನಡೆದ ವಿಧಾನಸಭೆ ಚುನಾವಣೆ ವೇಳೆ ಜೆಡಿಎಸ್ ಅಭ್ಯರ್ಥಿಯಾಗಿದ್ದ ಡಿ.ಸಿ. ಗೌರಿಶಂಕರ್ ಮತ್ತು ದಿ ನ್ಯೂ ಇಂಡಿಯಾ ಇನ್ಶೂರೆನ್ಸ್ ಕಂ.ಲಿ.ಡಿವಿನಲ್ ಮ್ಯಾನೇಜರ್ ದೇವೇಂದ್ರ ಪ್ರಸಾದ್ ಮತ್ತು ಅಧಿಕಾರಿಗಳು, ಕಮ್ಮಗೊಂಡನಹಳ್ಳಿ ಶ್ರೀ ಮಾರುತಿ ಸೇವಾ ಸಮಿತಿಯ ಪದಾಧಿಕಾರಿಗಳು, ಒನ್ ರೂಪಿ ಚಾರಿಟಬಲ್ ಟ್ರಸ್ಟ್ನ ಕಿಶೋರ್ ಹಾಗೂ ಪದಾಧಿಕಾರಿಗಳು ಮತ್ತು ಮೆಡಿ ಅಸಿಸ್ಟೆನ್ಸ್ ಕಂಪನಿಯ ಅಧಿಕಾರಿಗಳು ತುಮಕೂರು ಗ್ರಾಮಾಂತರ ಕ್ಷೇತ್ರದ ವ್ಯಾಪ್ತಿಯಲ್ಲಿ ಸರಕಾರಿ ಶಾಲಾ ಮಕ್ಕಳಿಗೆ ಗ್ರೂಪ್ ಇನ್ಶೂರೆನ್ಸ್ ಪಾಲಿಸಿಗಳನ್ನು ಚುನಾವಣೆ ವೇಳೆ ನೀಡಿರುವುದು ಸ್ಪಷ್ಟವಾಗಿದೆ. ಐಆರ್ಡಿಎಐ ಆಕ್ಟ್ ಪ್ರಕಾರ ವಂಚಿಸುವ ಉದ್ದೇಶ ಹೊಂದಲಾಗಿದೆ. ಈ ಬಗ್ಗೆ ಮುಖ್ಯ ಚುನಾವಣಾ ಆಯುಕ್ತರಿಗೂ ದೂರನ್ನು ನೀಡಿದ್ದೇನೆ ಎಂದು ದೂರುದಾರರು ತಿಳಿಸಿದ್ದಾರೆ.
ತುಮಕೂರು ಗ್ರಾಮಾಂತರ ಕ್ಷೇತ್ರಕ್ಕೆ ಬರುವಂತಹ ಸರಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ 40,000 ಇನ್ಸೂರೆನ್ಸ್ಗಳನ್ನು ಮಾಡಿಸಿರುವುದು ತಿಳಿದುಬಂದಿದೆ. ದಿ ನ್ಯೂ ಇಂಡಿಯಾ ಇನ್ಶೂರೆನ್ಸ್ ಕಂ.ಲಿ ಅವರು ತಿಳಿಸಿರುವಂತೆ 50 ಶಾಲೆಗಳ ಸುಮಾರು 16,000 ಮಕ್ಕಳಿಗೆ ಗ್ರೂಪ್ ಇನ್ಸೂರೆನ್ಸ್ಗಳನ್ನು ಮಡಿರುವುದಾಗಿ ಹೇಳಿದ್ದಾರೆ. ಇವೆಲ್ಲವೂ ನಕಲಿ ಎಂದು ತಿಳಿದುಬಂದಿರುತ್ತದೆ. ಅಲ್ಲದೆ ಶ್ರೀ ಮಾರುತಿ ಸೇವಾ ಸಮಿತಿಯ ಪದಾಧಿಕಾರಿಗಳು, ಒನ್ ರೂಪಿ ಚಾರಿಟಬಲ್ ಟ್ರಸ್ಟ್ನ ಕಿಶೋರ್ ಮತ್ತು ಟ್ರಸ್ಟ್ಗೆ ಸಂಬಂಧಿಸಿದ ಪದಾಧಿಕಾರಿಗಳು ಮತ್ತು ಇ ಕಾರ್ಡ್ ನೀಡುವ ಮೆಡಿ ಅಸಿಸ್ಟೆನ್ಸ್ ಕಂಪನಿಯ ಅಧಿಕಾರಿಗಳು, ಅಕ್ರಮ ಲಾಭ ಪಡೆಯುವ ಉದ್ದೇಶದಿಂದ ಒಳಸಂಚು ರೂಪಿಸಿ ನಕಲಿ ಸೃಷ್ಟಿಸಿರುವ ವಿಮಾ ಪಾಲಿಸಿಗಳನ್ನು ಅಸಲಿ ಎಂದು ಸರ್ಕಾರಿ ಶಾಲಾ ಮಕ್ಕಳಿಗೆ ವಿತರಿಸಿ ಮೋಸ ಹಾಗೂ ನಂಬಿಕೆದ್ರೋಹ ಮಾಡಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ.
ಮೇ 5 ರಂದೇ ಮುಖ್ಯಮಂತ್ರಿಗಳಿಗೆ ದೂರು ನೀಡಲಾಗಿತ್ತು…
ರಮೇಶ್ ಬೆಟ್ಟಯ್ಯ ಎಂಬುವರು ಮೇ 5ರಂದೇ ಈ ಕುರಿತಂತೆ ಮುಖ್ಯಮಂತ್ರಿಗಳಿಗೆ ದೂರು ನೀಡಿದ್ದರು. ಡೈರೆಕ್ಟರ್ ಜನರಲ್ ಮತ್ತು ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ಡಾ. ಕೆ.ವಿ. ಜಗದೀಶ್ ಜೂನ್ 12ರಂದು ತುಮಕೂರು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗೆ ಪತ್ರವೊಂದರನ್ನು ಬರೆದಿದ್ದಾರೆ. ಅದ್ರಲ್ಲಿ ರಮೇಶ್ ಬೆಟ್ಟಯ್ಯ ಎಂಬುವರು ಸಲ್ಲಿಸಿರುವ ದೂರಿನಲ್ಲಿ ವಿಧಾನಸಭೆ ಚುನಾವಣೆ ವೇಳೆ 2018ರ ಸಮಯದಲ್ಲಿ ದಾಖಲೆಯಾಗಿರುವ ಸಿಸಿ ನಂ.2493/2018 ತುಮಕೂರು ನ್ಯಾಯಾಲಯದಲ್ಲಿ ಪ್ರಕರಣ ವಜಾಗೊಂಡಿದ್ದು, ಸದರಿ ಪ್ರಕರಣವನ್ನು ಪ್ರತ್ಯೇಕವಾಗಿ ತನಿಖೆಯನ್ನು ಮಾಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಸದರಿ ದೂರಿನ ಮೇಲೆ ಮುಖ್ಯಮಂತ್ರಿ ತನಿಖೆಗೆ ಆದೇಶ ನೀಡಿದ್ದಾರೆ. ಅದರನ್ವಯ ದೂರಿನ ಅಂಶಗಳ ಮೇಲೆ ಪರಿಶೀಲಿಸಿ ಅಡ್ರೋಕೇಟ್ ಜನರಲ್ ಅವರ ಅಭಿಪ್ರಾಯ ಪಡೆಯಲಾಗಿದೆ. ಅದ್ರಂತೆ ಪ್ರಕರಣದ ತನಿಖೆ ನಡೆಸಿ ಎಂದು ಸೂಚಿಸಿದ್ದಾರೆ. ಬೆಂಗಳೂರಿನ ಡಿಜಿ ಕಚೇರಿಯಿಂದ ಬಂದ ಆದೇಶದ ಮೇರೆಗೆ ಮತ್ತು ದೂರಿನ ಪ್ರತಿಯ ಮೇರೆಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ವಂಶಿ ಕೃಷ್ಣ ಈಟಿವಿ ಭಾರತ್ಗೆ ಸ್ಪಷ್ಟಪಡಿಸಿದ್ದಾರೆ.