ತುಮಕೂರು: ತುಮಕೂರಿನ ಹೊರವಲಯದ ವಸತಿ ಶಾಲೆಯೊಂದರಲ್ಲಿ ಸಹಪಾಠಿಗಳೇ ವಿದ್ಯಾರ್ಥಿಯೊಬ್ಬನಿಗೆ ವಿಚಿತ್ರವಾಗಿ ಕಿರುಕುಳ ನೀಡಿರುವ ಘಟನೆ ನಡೆದಿದ್ದು, ಈ ಕುರಿತಂತೆ ಕಿರುಕುಳಕ್ಕೊಳಗಾದ ವಿದ್ಯಾರ್ಥಿಯ ಪೋಷಕರು, ಶಾಲೆಯ ಸಿಬ್ಬಂದಿ ಹಾಗೂ ಕಿರುಕುಳ ನೀಡಿದ ವಿದ್ಯಾರ್ಥಿಗಳ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳು ತಮ್ಮದೇ ಗೆಳೆಯನೊಬ್ಬನನ್ನು ಸಲಿಂಗ ಕಾಮಕ್ಕೆ ಒತ್ತಾಯಿಸಿ ಚಿತ್ರಹಿಂಸೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
ಕೆಲವು ವಿದ್ಯಾರ್ಥಿಗಳು ಅತ್ಯಂತ ಅಸಹ್ಯ ರೀತಿಯಲ್ಲಿ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ಸಂತ್ರಸ್ತ ಸಲಿಂಗ ಕಾಮಕ್ಕೆ ಸಹಕರಿಸದೇ ಇದ್ದುದಕ್ಕೆ ಆತನಿಗೆ ಬ್ಲೇಡ್‌ನಿಂದ ಕೊಯ್ದು, ಕಾದ ಮೇಣ ಸುರಿಸಿದ್ದಲ್ಲದೆ, ತಲೆಗೆ ರಾಡ್‌ನಿಂದ ಹೊಡೆದಿದ್ದಾರೆ ಎನ್ನುವ ಗಂಭೀರ ಆರೋಪವಿದೆ. ದೌರ್ಜನ್ಯಕ್ಕೊಳಗಾದ ಬಾಲಕ ಈ ವಿಚಾರವನ್ನು ಹೆತ್ತವರಿಗೆ ತಿಳಿಸಿದ್ದಾನೆ. ಪೋಷಕರು ವಸತಿ ಶಾಲೆಯಲ್ಲಿ ವಿಚಾರಿಸಿದ್ದು ಪ್ರಾಂಶುಪಾಲೆ ಮತ್ತು ವಾರ್ಡನ್, ನಮ್ಮಲ್ಲಿ ಇಂಥ ಯಾವುದೇ ಕೃತ್ಯ ನಡೆದಿಲ್ಲ ಎಂಬ ಅಸಡ್ಡೆಯ ಮಾತಾಡಿದ್ದಾರೆಂದು ಪೋಷಕರು ಆರೋಪಿಸಿ ದೂರಿನಲ್ಲಿ ದಾಖಲಿಸಿದ್ದಾರೆ.
ತುಮಕೂರಿನ ಮಹಿಳಾ ಠಾಣೆಯಲ್ಲಿ ಪೋಕ್ಸೋ ಕಾಯಿದೆಯಡಿ ಎಫ್‌ಐಆರ್ ದಾಖಲಾಗಿದೆ. ವಾರ್ಡನ್, ಪ್ರಾಂಶುಪಾಲೆ, 9 ಮತ್ತು 10ನೇ ತರಗತಿಯ ಮೂವರು ಬಾಲಕರ ಮೇಲೆ ಎಫ್‌ಐಆರ್ ದಾಖಲಾಗಿದೆ. ಇದಾದ ಬಳಿಕ ವಸತಿ ಶಾಲೆಯ ಆವರಣದಲ್ಲಿ ಮಾಧ್ಯಮಕ್ಕೆ ಪ್ರವೇಶ ನಿಷೇಧದ ಬೋರ್ಡ್ ನೇತು ಹಾಕಲಾಗಿದೆ.
ಪ್ರಕರಣದಲ್ಲಿ ವಾರ್ಡನ್ ನಂಬರ್ 1 ಆರೋಪಿ ಎಂದು ಗುರುತಿಸಲಾಗಿದೆ. ಪೋಷಕರು ಹಲವಾರು ಬಾರಿ ಲೈಂಗಿಕ ಕಿರುಕುಳದ ಬಗ್ಗೆ ದೂರು ನೀಡಿದರೂ ಕ್ರಮ ಕೈಗೊಳ್ಳದ ಪ್ರಾಂಶುಪಾಲೆ 2ನೇ ಆರೋಪಿ ಎಂದು ಉಲ್ಲೇಖಿಸಲಾಗಿದೆ. ಈ ಘಟನೆ ನಡೆದು ಐದು ತಿಂಗಳು ಕಳೆದಿದೆ. ವಸತಿ ಶಾಲೆಯಲ್ಲಿ ನಡೆದ ದೌರ್ಜನ್ಯದಿಂದ ಗಾಯಗೊಂಡಿದ್ದ ಬಾಲಕನನ್ನು ಪೋಷಕರು ಕಳೆದ ಮಾರ್ಚ್ 23ರಂದೇ ಮನೆಗೆ ಕರೆದುಕೊಂಡು ಹೋಗಿದ್ದರು.
ತಲೆಗೆ ಬಲವಾದ ಏಟು ಬಿದ್ದುದರಿಂದ ಅರೆಪ್ರಜ್ಞಾವಸ್ಥೆಯಲ್ಲಿದ್ದ ಬಾಲಕನನ್ನು ಮೊದಲು ಬೆಂಗಳೂರಿನ ಕ್ಲಿನಿಕ್‌ಗೆ ಸೇರಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಕೊಡಿಸಿದರೂ ಸುಧಾರಣೆ ಕಾಣದೆ ಕಾರಣ ಜೂನ್ 23ರಿಂದ ಜುಲೈ 15ರ ವರೆಗೂ ನಿಮ್ಹಾನ್ಸ್‌ನಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಅದಾದ ಬಳಿಕ ಆತ ಚೇತರಿಸಿಕೊಂಡಿದ್ದಾನೆ. ಇದೆಲ್ಲವೂ ಮುಗಿದ ಬಳಿಕ ಈಗ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ.
ಇದನ್ನೂ ಓದಿ: ತನ್ನೊಂದಿಗೆ ಲೈಂಗಿಕತೆಯಿಂದ ದೂರವಿದ್ದ ಪತಿ ಮತ್ತೋರ್ವನ ತೆಕ್ಕೆಯಲ್ಲಿ.. ಬೆಂಗಳೂರಲ್ಲಿ ಗಂಡನ ವಿರುದ್ಧ ಪತ್ನಿ ದೂರು