ತುಮಕೂರು: ಮಹಾರಾಷ್ಟ್ರದ ರೆಡ್ ಝೋನ್ ಪ್ರದೇಶದಿಂದ ತುಮಕೂರು ಜಿಲ್ಲೆಗೆ ಪೊಲೀಸರ ಕಣ್ಣುತಪ್ಪಿಸಿ ಬಂದಿದ್ದ ಮೂವರ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ಕನವಳ್ಳಿಯಿಂದ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರಿಗೆ ಮೂವರು ಬಂದಿದ್ದರು. ಅಶೋಕ, ಮಲ್ಲಿಕಾರ್ಜುನ, ಚಂದ್ರಮೌಳಿ ಅವರು ಅಂತರಾಜ್ಯ ಪ್ರಯಾಣಿಕರಾಗಿದ್ದು ಕೆಂಪು ವಲಯದ ರಾಜ್ಯಗಳಿಂದ ರಾಜ್ಯಕ್ಕೆ ಒಳಬಂದಾಗ ಪಾಲಿಸಬೇಕಾದ ನಿಯಮಗಳನ್ನು ಪಾಲಿಸಿಲ್ಲ.
ಈ ಮೂವರು ಬೆಳಗಾವಿಯ ನಿಪ್ಪಾಣಿಗೆ ಕೆಎಸ್ಆರ್ಟಿಸಿ ಬಸ್ನಲ್ಲಿ ಬಂದು ಅಲ್ಲಿಂದ ಸ್ವಲ್ಪ ದೂರ ನಡೆದುಕೊಂಡು ಬಂದಿದ್ದರು. ಅಲ್ಲದೆ ಚೆಕ್ಪೋಸ್ಟ್ನಿಂದ ಮುಂದೆ ಹುಳಿಯಾರಿನಿಂದ ಕಾರನ್ನು ತರಿಸಿಕೊಂಡು ಕೆಂಕೆರೆ ಕುದುರೆ ಕಣಿವೆಗೆ ಬಂದಿದ್ದರು.
ಆರೋಪಿ ಅಶೋಕ ಎಂಬಾತನ ಸಹೋದರ ಪವನ ಎಂಬುವವನ ಜೊತೆ ಸ್ಕೂಟಿಯಲ್ಲಿ ಕಾಡಿನ ದಾರಿಯಲ್ಲಿ ಪ್ರಯಾಣ ಮಾಡಿದ್ದರು. ಹುಳಿಯಾರಿನ ಗಾಂಧಿಭವನದಲ್ಲಿ ಇರುವ ಅಶೋಕನ ಮನೆಗೆ ಬಂದು ಮೂವರು ಸೇರಿಕೊಂಡಿದ್ದರು.
ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಒಂದು ಕಾರು ಒಂದು ಸ್ಕೂಟಿ ಹಾಗೂ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಲ್ಲದೆ ನಾಲ್ಕು ಮಂದಿಯನ್ನು ತುಮಕೂರು ಕೋವಿಡ್-19 ಆಸ್ಪತ್ರೆಯಲ್ಲಿನ ಐಸೋಲೇಷನ್ ವಾರ್ಡ್ ನಲ್ಲಿ ದಾಖಲು ಮಾಡಲಾಗಿದೆ.