ತುಮಕೂರು : ಜಮೀನು ಖಾತೆ ಮಾಡಿಕೊಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಗರ ಕೆಐಎಡಿಬಿ ವಿಶೇಷ ಭೂಸ್ವಾಧೀನಾಧಿಕಾರಿ ತಬಸುಮ್ ಜಹೇರಾ ಹಾಗೂ ಬೆಳ್ಳಾವಿ ಉಪ ತಹಶೀಲ್ದಾರ್ ಶಬ್ಬೀರ್ ಅವರಿಗೆ ತಲಾ ನಾಲ್ಕು ವರ್ಷ ಜೈಲು ಶಿಕ್ಷೆ ಮತ್ತು 20 ಸಾವಿರ ದಂಡ ವಿಧಿಸಿ ಇಲ್ಲಿನ 7ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶಿಸಿದೆ. ನ್ಯಾಯಾಧೀಶ ರಾಮಲಿಂಗೇಗೌಡ ಈ ತೀರ್ಪು ನೀಡಿದ್ದಾರೆ.
ಜಿಲ್ಲೆಯ ಕುಣಿಗಲ್ ತಾಲೂಕಿನ ಜಯರಾಮ ಎಂಬುವರು 2017ರಲ್ಲಿ ತಮ್ಮ ತಂದೆ ಹೆಸರಿಗೆ ಪೌತಿ ಖಾತೆ ಮಾಡಿಸುವ ಸಲುವಾಗಿ ಅಂದಿನ ಉಪ ವಿಭಾಗಾಧಿಕಾರಿಯಾಗಿದ್ದ ತಬಸುಮ್ ಜಹೇರಾ ಅವರನ್ನು ಭೇಟಿ ಮಾಡಿದ್ದರು. ಈ ವೇಳೆ, ಜಹೇರಾ ಅವರು ತಮ್ಮ ಕಚೇರಿಯ ಕೇಸ್ ವರ್ಕರ್ ಶಬ್ಬೀರ್ ಮೂಲಕ 35,000 ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಅದರಂತೆ 35,000 ರೂ. ಹಣವನ್ನು ಪಡೆದಿದ್ದರು. ಅದಾದ ನಾಲ್ಕು ತಿಂಗಳ ಬಳಿಕ ಮತ್ತೊಮ್ಮೆ 25,000 ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. ಇದರಿಂದ ಬೇಸತ್ತ ಜೈರಾಮ್ ಎಸಿಬಿಗೆ ದೂರು ನೀಡಿದ್ದರು. ಈ ದೂರಿನ ಅನ್ವಯ ದಾಳಿ ನಡೆಸಿದ ಭ್ರಷ್ಟಾಚಾರ ನಿಗ್ರಹದಳದ ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು.
ಸೆಪ್ಟೆಂಬರ್ 13ರಂದು ನ್ಯಾಯಾಲಯ ವಿಚಾರಣೆಯಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಆರೋಪಿಗಳಿಗೆ ತಲಾ ನಾಲ್ಕು ವರ್ಷ ಜೈಲು ಶಿಕ್ಷೆ ಹಾಗೂ 20,000 ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
1 ಸಾವಿರ ಲಂಚ ಪಡೆದ ಅಧಿಕಾರಿಗೆ 1 ವರ್ಷ ಜೈಲು ಶಿಕ್ಷೆ : ಉತ್ತರಕನ್ನಡ ಜಿಲ್ಲೆಯಲ್ಲಿ ತಂದೆಯ ಹೆಸರಿನಲ್ಲಿದ್ದ ಜಮೀನನ್ನು ವಾರಸಾ ಮಾಡಲು ಒಂದು ಸಾವಿರ ಲಂಚ ಪಡೆದಿದ್ದ ಶಿರಸ್ತೇದಾರನ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ, ವಿಶೇಷ ಮತ್ತು ಪ್ರಧಾನ ಜಿಲ್ಲಾ ಸತ್ರ ನ್ಯಾಯಾಲಯ 1 ವರ್ಷ ಜೈಲು ಹಾಗೂ 10 ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಿತ್ತು.
ಯಲ್ಲಾಪುರ ತಹಶೀಲ್ದಾರ್ ಕಚೇರಿಯ ಶಿರಸ್ತೇದಾರ ವಿನಾಯಕ ಪಾಯ್ಕಾರಾಮ ಗಾಂವಕಾರ ಶಿಕ್ಷೆಗೊಳಗಾದ ವ್ಯಕ್ತಿ. ಇವರು ಯಲ್ಲಾಪುರ ತಾಲೂಕಿನ ಹಿತ್ಲಳ್ಳಿ ನಾಗೇಂದ್ರ ಶಿವರಾಮ ಹೆಗಡೆ ಎಂಬುವವರ ತಂದೆಯವರ ಹೆಸರಿನಲ್ಲಿದ್ದ ಜಮೀನಿನ ವಾರಸಾ ಬದಲಾಯಿಸಲು ಹಣಕ್ಕೆ ಬೇಡಿಕೆ ಇಟ್ಟಿದ್ದರು. ಪಿರ್ಯಾದಿದಾರರಿಂದ 1 ಸಾವಿರ ರೂ. ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಆಪಾದಿತನ ವಿರುದ್ಧ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ-1988 , ಕಲಂ 07 ರ ಅಡಿ 1 ವರ್ಷ ಸಾದಾ ಕಾರಾವಾಸ ಹಾಗೂ ರೂ. 5000 ದಂಡ ಹಾಗೂ ಕಲಂ: 13 (1) (ಡಿ) ಸಹಿತ 13(2)ರ ಅಡಿ 1 ವರ್ಷ ಸಾದಾ ಕಾರಾಗೃಹ ವಾಸ ಹಾಗೂ ರೂ. 5000 ದಂಡ ವಿಧಿಸಿದೆ. ಸದರಿ ಆದೇಶಗಳನ್ನು ಸಮರ್ತಿತವಾಗಿ ಜಾರಿ ಮಾಡಿದ್ದು, ದಂಡ ಪಾವತಿಸದೇ ಇದ್ದಲ್ಲಿ ಹೆಚ್ಚುವರಿ 6 ತಿಂಗಳ ಸಾದಾ ಕಾರವಾಸ ಶಿಕ್ಷೆಗೆ ಗುರಿಪಡಿಸಿ ಆದೇಶಿಸಿತ್ತು.
ಇದನ್ನೂ ಓದಿ : ಲಂಚ ಪಡೆಯುವಾಗ ಸಿಕ್ಕಿಬಿದ್ದು ಸಾಕ್ಷಿ ನಾಶಕ್ಕಾಗಿ 4,500 ರೂಪಾಯಿ ನೋಟುಗಳನ್ನೇ ನುಂಗಿದ ಚಾಲಾಕಿ ಅಧಿಕಾರಿ!