ತುಮಕೂರು: ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ತುಮಕೂರು ತಾಲೂಕಿನ ಚಿಕ್ಕತೊಟ್ಟಿಲು ಕೆರೆ ಬಳಿ ನಡೆದಿದೆ. ಭೀಮಾಶಂಕರ್ (15) ಸಾವನ್ನಪ್ಪಿದ ವಿದ್ಯಾರ್ಥಿಯಾಗಿದ್ದಾನೆ. ಯಾದಗಿರಿ ಜಿಲ್ಲೆಯ ಸುರಪುರ ಮೂಲದ ಭೀಮಾಶಂಕರ್ ತುಮಕೂರು ತಾಲೂಕಿನ ಬೆಳದರ ಸರ್ಕಾರಿ ಪ್ರೌಢಶಾಲೆಯಲ್ಲಿ 10 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದನು.
ಚಿಕ್ಕತೊಟ್ಟಿಲು ಕೆರೆ ಬಳಿ ನಡೆಯುತ್ತಿದ್ದ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಭಾಗಿಯಾಗಿದ್ದ ಭೀಮಾಶಂಕರ್ ಕ್ರೀಡಾಕೂಟದಲ್ಲಿ ನಡೆದ ರಿಲೇ ಸ್ಫರ್ಧೆಯಲ್ಲಿ ದ್ವೀತಿಯ ಬಹುಮಾನ ಪಡೆದಿದ್ದನು. ಆದರೆ, ಬಹುಮಾನ ಪಡೆಯುವ ಮೊದಲೇ ಹೃದಯಾಘಾತವಾಗಿದೆ.
ಕೂಡಲೇ ಸ್ಥಳೀಯ ಆಸ್ಪತ್ರೆಗೆ ಬಾಲಕನನ್ನು ದಾಖಲಿಸುವಷ್ಟರಲ್ಲಿ ತನ್ನ ಪ್ರಾಣ ಬಿಟ್ಟಿದ್ದಾನೆ. ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ನಡೆಯಲಿರುವ ಮರಣೋತ್ತರ ಪರೀಕ್ಷೆ ನಂತರ ಆತನ ಪೋಷಕರಿಗೆ ಮೃತ ದೇಹವನ್ನು ಹಸ್ತಾಂತರಿಸಲಾಗುವುದು. ಈ ಸಂಬಂಧ ಕೋರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಕ್ಕಳಲ್ಲಿ ಹೃದಯಾಘಾತಕ್ಕೆ ಕಾರಣವೇನು?: ಶಾಲಾ ಮಕ್ಕಳು ಇತ್ತೀಚಿನ ದಿನಗಳಲ್ಲಿ ಹೃದಯಾಘಾತಕ್ಕೆ ಒಳಗಾಗುತ್ತಿರುವ ಘಟನೆಗಳು ವರದಿಯಾಗುತ್ತಿವೆ. 75 % ಈ ಹೃದಯಾಘಾತಗಳಿಗೆ ಕಾರಣ ಜಂಕ್ ಫುಡ್ ಸೇವನೆ ಮತ್ತು ಕಡಿಮೆ ದೈಹಿಕ ಚಟುವಟಿಕೆಗಳು ಎಂದು ವೈದರು ತಿಳಿಸಿದ್ದಾರೆ. ಇನ್ನು ಉಳಿದ 25% ಮೇಲಿನ ಘಟನೆಯಂತೆ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಅತಿ ಆಯಾಸ ಅಥವಾ ಹೃದಯಕ್ಕೆ ಹೆಚ್ಚಿನ ಒತ್ತಡ ಬಿದ್ದಾಗ ಉಂಟಾಗುತ್ತದೆ. ಹೃದಯತಜ್ಞರು ತಿಳಿಸುವಂತೆ ಮಕ್ಕಳಲ್ಲಿ ಹೃದಯಾಘಾತದ ಪ್ರಕರಣಗಳು ಹೆಚ್ಚಿನ ಮಟ್ಟದಲ್ಲಿ ಇಲ್ಲ. ಆದರೆ, ಮಕ್ಕಳಲ್ಲಿ ಸ್ಥೂಲಕಾಯ ಮತ್ತು ಆಲಸ್ಯಕರ ಜೀವನಶೈಲಿ ಹೆಚ್ಚುತ್ತಿದೆ. ಇದರಿಂದ ಹೃದಯಾಘಾತದ ಅಪಾಯ ಹೆಚ್ಚುತ್ತಿದೆ ಎಂದು ತಿಳಿಸಿದ್ದಾರೆ.
ಪರಿಹಾರ: ಜೀವನ ಶೈಲಿ ಬದಲಾವಣೆಯೆ ಇದಕ್ಕೆ ಮೊದಲ ಪರಿಹಾರವಾಗಿದೆ. ಮಕ್ಕಳ ಜೀವನಶೈಲಿಯಲ್ಲಿ ಸರಿಯಾದ ವ್ಯಾಯಾಮದ ಅಭ್ಯಾಸ, ಸಮತೋಲಿತ ಆಹಾರ, ಕಡಿಮೆ ಸಕ್ಕರೆ, ಕಾರ್ಬೋಹೈಡ್ರೇಟ್, ಕೊಬ್ಬಿಗೆ ಬದಲಾಗಿ ಹಣ್ಣುಗಳು ಅಥವಾ ಮನೆಯಲ್ಲಿ ತಯಾರಿಸಿ ಆಹಾರಗಳ ಸೇವನೆ ಪ್ರಮುಖ ಪಾತ್ರವಹಿಸುತ್ತದೆ. ಮಕ್ಕಳಿಗೆ ದಿನದಲ್ಲಿ ಕನಿಷ್ಟ 30ರಿಂದ 1 ಗಂಟೆ ದೈಹಿಕ ಚಟುವಟಿಕೆ ಅಭ್ಯಾಸಕ್ಕೆ ಪ್ರೋತ್ಸಾಹ ನೀಡಬೇಕು. ಈಜು, ಸೈಕಲಿಂಗ್ ಅಥವಾ ಇನ್ನಿತರೆ ಹೊರಾಂಗಣ ಚಟುವಟಿಕೆಯಲ್ಲಿ ಅವರನ್ನು ತಲ್ಲೀನರಾಗಿಸಬೇಕು. ಈ ಮೂಲಕ ಮಕ್ಕಳ ಹೃದಯಾಘಾತವನ್ನು ತಡೆಯಬಹುದು.
ಭಾರತದಲ್ಲಿ 55 %ದಷ್ಟು ಹೃದಯಾಘಾತ ಸಾವಿಗೆ ಚಿಕಿತ್ಸೆಯೆ ವಿಳಂಬವೇ ಕಾರಣ: ದೇಶದಲ್ಲಿ ಹೃದಯಾಘಾತ ಹೆಚ್ಚಾಗಿ ಸಂಭವಿಸುತ್ತಲೇ ಇದೆ. ಆದರೆ, ಈ ಪ್ರಕರಣಗಳಲ್ಲಿ ಹೃದಯಾಘಾತವಾದ ವೇಳೆ ತಕ್ಷಣಕ್ಕೆ ಆರೈಕೆ ಸಿಗದೇ ಶೇ 55ರಷ್ಟು ಮಂದಿ ಸಾವನ್ನಪ್ಪುತ್ತಿದ್ದಾರೆ ಎಂದು ಹೊಸ ಅಧ್ಯಯನ ತಿಳಿಸಿದೆ. ಲ್ಯಾನ್ಸೆಟ್ ಜರ್ನಲ್ನಲ್ಲಿ ಪ್ರಕಟವಾಗಿರುವ ಮೊದಲ ಸಮುದಾಯದ ಆಧಾರಿತ ಅಧ್ಯಯನ ಇದಾಗಿದೆ. ಈ ಅಧ್ಯಯನ ಅನುಸಾರ ಭಾರತದಲ್ಲಿ ಶೇ 55ರಷ್ಟು ಮಂದಿ ಹೃದಯಘಾತದ ಸಾವಿಗೆ ಆರೈಕೆಯ ವಿಳಂಬವೇ ಕಾರಣ ಎಂದು ತಿಳಿಸಿದೆ. ಹೀಗಾಗಿ ಯಾರಿಗೆ ಆಗಲಿ ಹೃದಯಾಘಾತ ಉಂಟಾದಾಗ ತಕ್ಷಣ ಗಲಿಬಿಲಿಯಾಗದೇ ಪ್ರಥಮ ಚಿಕಿತ್ಸೆ ನೀಡಬೇಕು. ಆಮ್ಲಜನಕದ ವ್ಯವಸ್ಥೆ ಮಾಡಬೇಕು. ಆಸ್ಪತ್ರೆಗೆ ದಾಖಲಿಸುವರೆಗೂ ವ್ಯಕ್ತಿಗೆ ಗಾಳಿ ಒದಗಿ ಬರುವಂತೆ ಪರಿಸ್ಥಿತಿ ನಿರ್ಮಿಸಬೇಕು. ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಬೇಕು.
ಹೃದಾಯಘಾತದ ಲಕ್ಷಣಗಳನ್ನು ನೋಡುವುದಾದರೆ, ಮೊದಲು ಎದೆಯ ಮಧ್ಯದಲ್ಲಿ ನೋವು ಪ್ರಾರಂಭವಾಗುತ್ತದೆ. ಆ ಸಂದರ್ಭದಲ್ಲಿ ಅದನ್ನು ನಿರ್ಲಕ್ಷಿಸಬೇಡಿ. ನಿಮ್ಮ ಹತ್ತಿರದಲ್ಲಿರುವವರಿಗೆ ತಕ್ಷಣವೇ ತಿಳಿಸಿ. ಎದೆ ನೋವು ಅಲ್ಲದೆ, ಅಸ್ವಸ್ಥತೆ, ಉಸಿರಾಟದ ತೊಂದರೆ, ತಲೆ ತಿರುಗುವಿಕೆ, ಮೂರ್ಛೆ ಹೋಗುವುದು, ವಾಕರಿಕೆ, ಬೆವರುವುದು ಉಂಟಾಗುತ್ತದೆ.
ಹೃದಯಾಘಾತಕ್ಕೆ ಪ್ರಮುಖವಾಗಿ ಅಧಿಕ ರಕ್ತದ ಒತ್ತಡ, ಮಧುಮೇಹ ಕಾರಣವಾಗುತ್ತದೆ. ಇದಕ್ಕಾಗಿ ಅಧಿಕ ಉಪ್ಪು ಬಳಕೆ ಕಡಿಮೆ ಮಾಡುವುದು ಉತ್ತಮ. ದಿನಕ್ಕೆ 30 ನಿಮಿಷವಾದರು ವ್ಯಾಯಾಮ ಮಾಡಿ. ಎಲ್ಲಕ್ಕಿಂತ ಮುಖ್ಯವಾಗಿ ಕಡಿಮೆ ಅಂದರೆ 2 ತಿಂಗಳಿಗೊಮ್ಮೆಯಾದರು ನಿಮ್ಮ ಹತ್ತಿರದ ವೈದ್ಯರ ಬಳಿ ಆರೋಗ್ಯ ತಪಾಸಣೆ ಮಾಡಿಸಿ. ಈ ಮೂಲಕವಾದರೂ ಸಂಭವಿಸುವ ಹೃದಯಾಘಾತವನ್ನು ಬಹುತೇಕ ಮಟ್ಟಿಗೆ ತಡೆಗಟ್ಟಬಹುದು.
ಇದನ್ನೂ ಓದಿ: ಶಟಲ್ ಆಡುವಾಗ ಹೃದಯಾಘಾತದಿಂದ ವ್ಯಕ್ತಿ ಸಾವು.. ಸಿಸಿಟಿವಿಯಲ್ಲಿ ದೃಶ್ಯ ಸೆರ