ತುಮಕೂರು: ರಾಜ್ಯದಲ್ಲಿನ ಆಯುಧ ಪೂಜೆಯ ಸಂಭ್ರಮ, ಸಡಗರದ ನಡುವೆಯೂ ಶಿರಾ ವಿಧಾನಸಭಾ ಉಪಚುನಾವಣೆಯ ಪ್ರಚಾರ ಕಾರ್ಯದಲ್ಲಿ ಬಿಜೆಪಿ ನಿರತವಾಗಿದೆ.
ಇಂದು ಕೂಡಾ ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ ಹಾಗೂ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ಕೈಗೊಂಡರು. ಕ್ಷೇತ್ರದ ಹೆಂದೊರೆ, ಪಟ್ಟನಾಯಕನಹಳ್ಳಿ,ವೀರಗಾನಹಳ್ಳಿ, ಕಾಮಗೊಂಡನಹಳ್ಳಿ, ಗುಂಡಪ್ಪ ಚಿಕ್ಕನಹಳ್ಳಿ, ವೀರಾಪುರ ಸೇರಿ ವಿವಿಧ ಗ್ರಾಮಗಳಲ್ಲಿ ಅವರು ರೋಡ್ ಶೋ ನಡೆಸಿದರು.
ಇದೇ ವೇಳೆ ಮಾತನಾಡಿದ ಕಾರಜೋಳ, ದೇಶಕ್ಕೆ ಸ್ವಾತಂತ್ರ ಬಂದ 70 ವರ್ಷಗಳಲ್ಲಿ ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದ ಶಾಸಕರು ಗೆದ್ದು ಬಂದಿದ್ದಾರೆ. ಆದ್ರೆ ಇಲ್ಲಿ ನಿರೀಕ್ಷೆಯಂತೆ ಅಭಿವೃದ್ಧಿ ಕಾರ್ಯಕ್ರಮಗಳು ನಡೆದಿಲ್ಲ. ಇದೀಗ ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದ್ದು ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ ಗೆದ್ದು ಬಂದರೆ ಸರ್ಕಾರದ ಭಾಗವಾಗಲಿದ್ದಾರೆ. ಅಲ್ಲದೆ ನಿರೀಕ್ಷೆಗೂ ಮೀರಿ ಅಭಿವೃದ್ಧಿ ಕಾರ್ಯಕ್ರಮಗಳು ನಡೆಯಲಿವೆ. ಹೀಗಾಗಿ ರಾಜೇಶ ಗೌಡರಿಗೆ ಮತ ನೀಡಿ ಆರಿಸಿ ಕಳಿಸುವಂತೆ ಮನವಿ ಮಾಡಿದರು.
ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ ಮಾತನಾಡಿ, ಶಿರಾ ವಿಧಾನಸಭಾ ಕ್ಷೇತ್ರ ಸಂಪೂರ್ಣ ಕೆಸರುಮಯವಾಗಿದೆ. ಅಭಿವೃದ್ಧಿ ಕಾರ್ಯಕ್ರಮಗಳು ಕುಂಠಿತವಾಗಿವೆ. ಈ ಬಾರಿ ನನಗೆ ಮತ ನೀಡಿ ಅಭಿವೃದ್ಧಿ ಕೆಲಸ ಮಾಡಲು ಅವಕಾಶ ಮಾಡಿಕೊಡಿ ಎಂದರು.
ಈ ವೇಳೆ ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಸೇರಿ ಹಲವರು ಕ್ಯಾಂಪೇನ್ ನಡೆಸಿದರು.