ತುಮಕೂರು: ರಾಜ್ಯಾದ್ಯಂತ ಇಂದಿನಿಂದ ಪೂರ್ಣ ಪ್ರಮಾಣದಲ್ಲಿ ಶಾಲೆಗಳನ್ನು ತೆರೆಯಲಾಗುತ್ತಿದೆ. ಆದರೆ ತುಮಕೂರು ತಾಲೂಕಿನ ಬೆಳ್ಳಿಬಟ್ಟಲ ಗ್ರಾಮದ ಶಾಲೆ ಮಾತ್ರ ಇನ್ನೂ ಆರಂಭ ಭಾಗ್ಯ ಕಂಡಿಲ್ಲ.
ದೇವರಾಯನದುರ್ಗ ಬೆಟ್ಟಲಿನ ತಪ್ಪಲಿನಲ್ಲಿರುವ ಊರ್ಡಿಗೆರೆ ಬಳಿಯ ಬೆಳ್ಳಿಬಟ್ಟಲ ಗ್ರಾಮದ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ ಮೂರು ವರ್ಷದಿಂದ ತರಗತಿಗಳು ನಡೆಯುತ್ತಿಲ್ಲ. ಪರಿಣಾಮ ಶಾಲೆಯನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ.
ಹೌದು, ಬೆಳ್ಳಿಬಟ್ಟಲ ಹಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ವಿವಾದದಿಂದಾಗಿ ಈ ಶಾಲೆಗೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಬರುತ್ತಿಲ್ಲ. ಪರಿಣಾಮ ಶಾಲೆಯನ್ನು ಮುಚ್ಚುವ ಸ್ಥಿತಿ ನಿರ್ಮಾಣವಾಗಿದೆ. ಊರ್ಡಿಗೆರೆ-ಕೊರಟಗೆರೆಯ ರಾಜ್ಯ ಹೆದ್ದಾರಿಯಿಂದ ಬೆಳ್ಳಿಬಟ್ಟಲ ಹಳ್ಳಿಗೆ ಸುಮಾರು 1.5 ಕಿ.ಮೀ ದೂರ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿತ್ತು. ಈ ನಡುವೆ ಸಿದ್ದರಾಮಣ್ಣ ಎನ್ನುವರು ರಸ್ತೆ ನಿರ್ಮಾಣಕ್ಕೆ ತಕರಾರು ಮಾಡಿದ್ದು, ಕಾಮಗಾರಿ ಅರ್ಧಕ್ಕೆ ನಿಲ್ಲಿಸಿದ್ದಾರೆ. ಅಲ್ಲದೇ, ಈ ಹಿಂದೆ ಇದ್ದ ವಾಡಿಕೆ ರಸ್ತೆ ಪ್ರದೇಶ ತಮಗೆ ಸೇರಿದ್ದು ಎಂದು ಬೇಲಿಹಾಕಿ, ಬೀಜ ಬಿತ್ತನೆ ಮಾಡಿದ್ದಾರೆ. ಇದರಿಂದಾಗಿ ವಿದ್ಯಾರ್ಥಿಗಳು, ಶಿಕ್ಷಕರು ಶಾಲೆಗೆ ಹೋಗಲು ರಸ್ತೆ ಇಲ್ಲದಂತಾಗಿದೆ.
ಇನ್ನು ಈ ಶಾಲೆಯಲ್ಲಿ 1ರಿಂದ 5 ನೇ ತರಗತಿ ನಡೆಸಲಾಗುತ್ತಿತ್ತು. ಅಂಗನವಾಡಿ ಸಹ ಇದ್ದು, ಇದ್ದ ಇಬ್ಬರು ಶಿಕ್ಷಕರು ಬೇರೆ ಕಡೆ ವರ್ಗಾವಣೆ ಮಾಡಿಕೊಂಡು ಹೋಗಿದ್ದಾರೆ. ಅಂಗನವಾಡಿಗೆ ಆಹಾರ ತರಬೇಕಂದ್ರೆ ಹೆದ್ದಾರಿಯಲ್ಲೇ ವಾಹನ ನಿಲ್ಲಿಸಿ, ತಲೆಯ ಮೇಲೆ ಹೊತ್ತುಕೊಂಡು ಬರುವಂತಹ ಸ್ಥಿತಿ ನಿರ್ಮಾಣವಾಗಿದೆ.
ಮಾಲೀಕ ಸಿದ್ದರಾಮಯ್ಯ ಪ್ರಕಾರ, ರಸ್ತೆ ನಮ್ಮ ಜಮೀನ ಮಧ್ಯೆಕ್ಕೆ ಹೋಗಿ ಇಬ್ಬಾಗ ಮಾಡುತ್ತದೆ. ಜಮೀನಿನ ಕೊನೆಯಲ್ಲಿ ನಾವು 15 ಅಡಿ ಜಾಗ ಬಿಡುತ್ತೇವೆ. ಜೊತೆಗೆ ಪಕ್ಕದ ಜಮೀನಿನವರು 15 ಅಡಿ ಜಾಗ ಬಿಟ್ಟು ಕೊಡಲಿ ಎಂದು ವಾದ ಮುಂದಿಟ್ಟಿದಾರೆ. ಪರಿಣಾಮ ರಸ್ತೆ ಕಾಮಗಾರಿ ಅರ್ಧಕ್ಕೆ ನಿಂತಿದೆ.
ಒಟ್ಟಾರೆ ಸರ್ಕಾರಿ ಶಾಲೆ ಮೂರು ವರ್ಷದಿಂದ ಮುಚ್ಚಿದರೂ ಕೂಡ ಅಧಿಕಾರಿಗಳು, ಜನಪ್ರತಿನಿಧಿಗಳು ರಸ್ತೆ ವಿವಾದ ಬಗೆಹರಿಸುವ ಇಚ್ಛಾ ಶಕ್ತಿತೋರುತ್ತಿಲ್ಲ. ಹೀಗಾಗಿ ಕೂಡಲೇ ಸಂಬಂಧಪಟ್ಟವರು ಇತ್ತ ಗಮನಹರಿಸಿ, ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಮುಂದಾಗಬೇಕಿದೆ.