ತುಮಕೂರು : ಈ ಹಿಂದಿನ ಯಾವುದೇ ವಿಧಾನಸಭಾ ಚುನಾವಣೆಯಲ್ಲಿ ಶಿರಾ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿಲ್ಲ. ಈ ವಿಷಯ ನನಗೂ ಗೊತ್ತಿದೆ. ಅದೇ ಕೆ ಆರ್ ಪೇಟೆ ವಿಧಾನಸಭೆ ಚುನಾವಣೆ ಮಾದರಿ ಶಿರಾ ವಿಧಾನಸಭಾ ಕ್ಷೇತ್ರದಲ್ಲಿಯೂ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ತಿಳಿಸಿದ್ದಾರೆ.
ತುಮಕೂರು ಜಿಲ್ಲೆ ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಉಪಚುನಾವಣೆ ಹಿನ್ನೆಲೆ ಬಿಜೆಪಿ ಪರ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡಿದ್ದ ಅವರು, ಶಿರಾ ಪಟ್ಟಣದ ಕೋಟೆ ಆಂಜನೇಯ ದೇಗುಲ ಬಳಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು.
ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ಗೆಲುವು ಸಾಧ್ಯವೇ ಇಲ್ಲ ಎಂದು ಕೆ ಆರ್ ಪೇಟೆ ವಿಧಾನಸಭೆ ಚುನಾವಣೆಯಲ್ಲಿ ವಿರೋಧ ಪಕ್ಷ ಮುಖಂಡರು ಬೊಬ್ಬೆ ಹೊಡೆಯುತ್ತಿದ್ದರು. ಆದರೆ, ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಜನ್ಮ ನೀಡಿದಂತಹ ಕೆ ಆರ್ ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಹತ್ತು ಸಾವಿರಕ್ಕಿಂತ ಹೆಚ್ಚು ಮತಗಳ ಲೀಡ್ ಪಡೆದು ಬಿಜೆಪಿ ಗೆಲುವು ಸಾಧಿಸಿತು. ಪ್ರಸ್ತುತ ಬಿಜೆಪಿ ಅಧಿಕಾರದಲ್ಲಿದೆ. ಯಾವುದೇ ಕ್ಷೇತ್ರವು ಅಭಿವೃದ್ಧಿಯಾಗಬೇಕೆಂದ್ರೆ ಸರ್ಕಾರದ ಸಹಕಾರ ಅಗತ್ಯವಿದೆ. ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿಯಾಗಬೇಕು ಎಂಬ ಇಚ್ಛೆ ಕ್ಷೇತ್ರದ ಮುಖಂಡರಲ್ಲಿ ಇದೆ ಎಂದರು.
ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಹಿಂದೆ ಗೆದ್ದಂತಹ ವಿವಿಧ ಪಕ್ಷದ ಮುಖಂಡರು ಎಷ್ಟರಮಟ್ಟಿಗೆ ಕ್ಷೇತ್ರದ ಅಭಿವೃದ್ಧಿಗೆ ಮುಂದಾಗಿದ್ದರು ಎಂಬುದನ್ನು ಮತದಾರರು ಗಮನಿಸಬೇಕು. ಬಿಜೆಪಿ ಪಕ್ಷದಿಂದ ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಅಭ್ಯರ್ಥಿ ಕಣಕ್ಕಿಳಿಸಿದ್ರೆ ಅವರ ಗೆಲುವಿಗೆ ಮುಖಂಡರು ಶ್ರಮಿಸಬೇಕು ಎಂದು ತಿಳಿಸಿದರು.
ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಈವರೆಗೂ ಬಿಜೆಪಿ ಇಲ್ಲ ಎಂಬ ಮಾತಿದೆ. ಅದನ್ನು ಅಳಿಸಿ ಹಾಕಬೇಕು. ಇದಕ್ಕೆ ಸಂಬಂಧಪಟ್ಟಂತೆ ಪಕ್ಷದ ಮುಖಂಡರು ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಲು ಮುಂದಾಗಬೇಕು ಎಂದು ಕರೆ ನೀಡಿದರು.