ತುಮಕೂರು : ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅವರ ಬಗ್ಗೆ ನಾನು ಹೇಳುವಂತಹದ್ದು ಏನೂ ಇಲ್ಲ. ಏಕೆಂದರೆ ಅವರು ಈ ಕ್ಷೇತ್ರವನ್ನ ನಮ್ಮ ಶಿಕಾರಿಪುರ ತಾಲೂಕಿಗಿಂತ ಹೆಚ್ಚು ಮಾದರಿ ಕ್ಷೇತ್ರವನ್ನಾಗಿ ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಹೊಗಳಿದರು.
ತಿಪಟೂರಿನಲ್ಲಿ ಇಂದು ರೋಡ್ ಶೋ ನಡೆಸುತ್ತಿದ್ದ ಸಂದರ್ಭದಲ್ಲಿ ಮಾತನಾಡಿದ ಅವರು, ಇಲ್ಲಿ ಸೇರಿರುವ ಜನಸ್ತೋಮವನ್ನ ನೋಡಿದ್ರೆ, ನಾಗೇಶ್ ಅವರು 20 ರಿಂದ 25 ಸಾವಿರ ಮತಗಳ ಅಂತರದಿಂದ ಗೆಲ್ಲೋದು ಗ್ಯಾರಂಟಿ ಎಂದರು. ನಾಗೇಶ್ಗೆ ನೀವೆಲ್ಲಾ ಆಶೀರ್ವಾದ ಮಾಡ್ಬೇಕು. ನಾಗೇಶ್ ಯಾರು ಅಂತ ಯೋಚನೆ ಮಾಡ್ಬೇಡಿ. ನಿಮ್ಮ ಯಡಿಯೂರಪ್ಪ ಅಂತ ತಿಳಿದು ಮತದಾನ ಮಾಡಿ ಎಂದರು.
ರಾಜ್ಯ ಅಭಿವೃದ್ಧಿ ಪಥದತ್ತ ಸಾಗುವುದರಲ್ಲಿ ಯಾವುದೇ ಅನುಮಾನ ಬೇಡ. ನಾನು ರಾಜ್ಯದ ಉದ್ದಗಲಕ್ಕೆ ಹೋಗಿ ಬಂದಿದ್ದೇನೆ. 130 ರಿಂದ 135 ಸೀಟ್ ಗಳನ್ನ ಗೆದ್ದು ಸರ್ಕಾರ ರಚಿಸೋದು ಖಚಿತ. ಬಿ ಸಿ ನಾಗೇಶ್ ಮತ್ತೆ ಮಂತ್ರಿಯಾಗೋದು ಗ್ಯಾರಂಟಿ, ಅವರು ಮಂತ್ರಿಯಾಗಿ ಆಯ್ಕೆ ಆಗಲು ನೀವು ಅವರನ್ನು ವಿಧಾನಸೌಧಕ್ಕೆ ಕಳುಹಿಸಿ. ನಿಮ್ಮೆಲ್ಲರ ಸಂಪೂರ್ಣ ಆಶೀರ್ವಾದ ನಾಗೇಶ್ ಮೇಲಿರಲಿ ಎಂದು ಬಿಎಸ್ವೈ ಹೇಳಿದರು.
ಯಡಿಯೂರಪ್ಪ ಪ್ರಯಾಣಿಸಿದ ಹೆಲಿಕಾಪ್ಟರ್ ತಪಾಸಣೆ ಮಾಡಿದ ಅಧಿಕಾರಿಗಳು: ತಿಪಟೂರಿನಲ್ಲಿ ಇಂದು ಸಚಿವ ಹಾಗೂ ಬಿಜೆಪಿ ಅಭ್ಯರ್ಥಿ ಬಿ ಸಿ ನಾಗೇಶ್ ಪರವಾಗಿ ಪ್ರಚಾರ ನಡೆಸಲು ಆಗಮಿಸಿದ್ದ ಬಿಎಸ್ವೈ ಅವರ ಹೆಲಿಕಾಪ್ಟರ್ ಅನ್ನು ಚುನಾವಣಾ ಅಧಿಕಾರಿಗಳು ತಪಾಸಣೆ ನಡೆಸಿದರು. ತಿಪಟೂರಿನ ಕಲ್ಪತರು ಕಾಲೇಜು ಕ್ರೀಡಾಂಗಣದ ಹೆಲಿಪ್ಯಾಡ್ನಲ್ಲಿ ಹೆಲಿಕಾಪ್ಟರ್ನಿಂದ ಬಿಎಸ್ವೈ ಕೆಳಗೆ ಇಳಿಯುತ್ತಿದ್ದಂತೆ ಅಧಿಕಾರಿಗಳು ತೀವ್ರ ತಪಾಸಣೆ ನಡೆಸಿದರು.
ತಿಪಟೂರಿನ ಅರಳಿಕಟ್ಟೆಯಿಂದ ಗುರುದರ್ಶನ್ ಹೋಟೆಲ್ವರೆಗೆ ರೋಡ್ ಶೋ ನಡೆಸಲಾಯಿತು. ಸುಮಾರು ಒಂದು ಕಿಲೋಮೀಟರ್ ರೋಡ್ ಶೋ ನಡೆಯಿತು. ತಿಪಟೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ ಸಿ ನಾಗೇಶ್ ಪರ ಮತಯಾಚನೆ ಮಾಡಿದರು. ಬಿಎಸ್ವೈ ಜೊತೆ ಬಿ ಸಿ ನಾಗೇಶ್ ಸೇರಿದಂತೆ ಸ್ಥಳೀಯ ಬಿಜೆಪಿಯ ಹಲವು ನಾಯಕರು ಸಾಥ್ ನೀಡಿದರು. ರೋಡ್ ಶೋನಲ್ಲಿ ಸಾವಿರಾರು ಕಾರ್ಯಕರ್ತರು ಭಾಗಿಯಾಗಿದ್ದರು.
ಕಾಂಗ್ರೆಸ್ ವಿರುದ್ಧ ಬಿ ಎಸ್ ಯಡಿಯೂರಪ್ಪ ಕಿಡಿ : ಇನ್ನೊಂದೆಡೆ ಬಜರಂಗದಳ ನಿಷೇಧ ಮಾಡಲು ಯಾರಿಂದಲೂ ಸಾಧ್ಯವಿಲ್ಲ, ಕಾಂಗ್ರೆಸ್‌ನವರು ಹುಚ್ಚುಹುಚ್ಚಾಗಿ ಮಾತನಾಡುತ್ತಿದ್ದಾರೆ. ಜನ ಅವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ. ಎಸ್ ಯಡಿಯೂರಪ್ಪ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಧಿಕೃತ ನಿವಾಸ ಕಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಜರಂಗದಳ ನಿಷೇಧ ಮಾಡುವುದಾಗಿ ಕಾಂಗ್ರೆಸ್ ಮೂರ್ಖ ನಿರ್ಧಾರ ತೆಗೆದುಕೊಂಡಿದೆ. ಕಾಂಗ್ರೆಸ್ ಪಕ್ಷದವರ ಈ ಹೇಳಿಕೆಯನ್ನು ನಾನು ಖಂಡಿಸುತ್ತೇನೆ. ಬಜರಂಗದಳವನ್ನು ಯಾರಿಂದಲೂ ಬ್ಯಾನ್ ಮಾಡೋಕೆ ಸಾಧ್ಯ ಇಲ್ಲ. ಹುಚ್ಚುಚ್ಚರ ತರ ಆಡುತ್ತಿರುವ ಕಾಂಗ್ರೆಸ್ ನಾಯಕರಿಗೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಗುಡುಗಿದ್ದರು.
ಇದನ್ನೂ ಓದಿ : ಬಜರಂಗದಳ ನಿಷೇಧ ಯಾರಿಂದಲೂ ಸಾಧ್ಯವಿಲ್ಲ: ಕಾಂಗ್ರೆಸ್ ವಿರುದ್ಧ ಬಿಎಸ್ ಯಡಿಯೂರಪ್ಪ ಕಿಡಿ