ತುಮಕೂರು : ಹಿತ್ತಲ ಗಿಡ ಮದ್ದಲ್ಲ ಎಂದು ಮೂಗುಮುರಿಯುವ ಜನರಿಗೆ ಇದೀಗ ಅನೇಕ ಔಷಧೀಯ ಸಸ್ಯಗಳು ಕೊರೊನಾ ಸೋಂಕಿನಿಂದ ಪಾರಾಗಲು ಸಹಕಾರಿ ಎಂಬ ಅಂಶ ಸಾಕಷ್ಟು ಪ್ರಚಲಿತದಲ್ಲಿದೆ. ಹೀಗಾಗಿ, ಜನ ಹಲವು ಔಷಧೀಯ ಗುಣಗಳುಳ್ಳ ಸಸ್ಯಗಳ ಮೊರೆ ಹೋಗಿದ್ದಾರೆ. ಅದರಲ್ಲಿ ಅಮೃತಬಳ್ಳಿ ಕೂಡ ಒಂದಾಗಿದೆ. ಇದರ ಬಳಕೆ ಮತ್ತು ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಲು ತುಮಕೂರು ಜಿಲ್ಲಾ ಪಂಚಾಯತ್ ಸದ್ದಿಲ್ಲದೆ ಮುಂದಾಗಿದೆ.
ಜಿಲ್ಲಾ ಪಂಚಾಯತ್ ಪ್ರತಿ ಸಾಮಾನ್ಯ ಸಭೆ, ಸಚಿವರು ನಡೆಸುವ ಪ್ರಗತಿ ಪರಿಶೀಲನಾ ಸಭೆಯಿದ್ರೆ ಜಿಪಂ ಸಭಾಂಗಣ ಸಂಪೂರ್ಣ ಹಸಿರುಮಯವಾಗಿರುತ್ತೆ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭ ಕಲ್ಯಾಣ್ ಪ್ರತಿ ಸಭೆಯಲ್ಲಿಯೂ ಅಧಿಕಾರಿಗಳು ಸಾಮಾಜಿಕ ಅಂತರದೊಂದಿಗೆ ಪಾಲ್ಗೊಳ್ಳಲಿ ಎಂಬ ಉದ್ದೇಶದಿಂದ ಸುತ್ತಲೂ ಗಿಡಗಳನ್ನು ಇರಿಸಿ ನಿರ್ಮಲ ವಾತಾವರಣ ಸೃಷ್ಟಿಸುತ್ತಾರೆ.
ಕೊರೊನಾ ಸೋಂಕು ಹರಡುವಿಕೆ ತಡೆಗೆ ಅತೀ ಮುಖ್ಯ ಸಾಮಾಜಿಕ ಅಂತರ ಪಾಲನೆ ಮಾಡಲು ಸಾಕಷ್ಟು ಸಹಕಾರಿ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಶುಭ ಕಲ್ಯಾಣ ಅವರು ಸೋಂಕಿನಿಂದ ಪಾರಾಗಲು ಹಾಗೂ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಬಳಕೆ ಮಾಡಲಾಗುತ್ತಿರುವ ಔಷಧೀಯ ಸಸ್ಯಗಳ ಕುರಿತು ಜಿಪಂ ಸಭೆಗೆ ಬರುವ ಅತಿಥಿಗಳಲ್ಲಿ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.
ಪ್ರತಿ ಜಿಲ್ಲಾ ಪಂಚಾಯತ್ ಸಭೆಯಲ್ಲಿ ಅತಿಥಿಗಳಿಗೆ ಅಮೃತಬಳ್ಳಿಯ ಸಸಿಗಳನ್ನು ಗಿಫ್ಟ್ ಆಗಿ ಕೊಡ ಮಾಡಲಾಗುತ್ತಿದೆ. ಅತಿಥಿಗಳು ಸಹ ತಪ್ಪದೇ ಸಸಿಗಳನ್ನು ಜತನದಿಂದ ಮನೆಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ಜಿಪಂ ಸಿಇಒ ಅವರ ಪ್ರಯತ್ನಕ್ಕೆ ಮನಸೋತಿದ್ದಾರೆ. ಸೋಂಕಿನ ವಿರುದ್ಧ ಅನೇಕ ಔಷಧೀಯ ಸಸ್ಯಗಳನ್ನ ಬಳಕೆ ಮಾಡಬಹುದಾಗಿದೆ. ಅದರಲ್ಲಿ ಅಮೃತಬಳ್ಳಿ ಸಾಕಷ್ಟು ಮಹತ್ವ ಹೊಂದಿದೆ ಎಂಬುದನ್ನು ಸಾರಿ ಹೇಳುತ್ತಿದ್ದಾರೆ. ಜಿಪಂ ಕಾರ್ಯನಿರ್ವಹಣಾಧಿಕಾರಿ ಶುಭ ಕಲ್ಯಾಣ ಅವರು, ಜನರು ಸೋಂಕಿನಿಂದ ಪಾರಾಗಲು ತೆಗೆದುಕೊಳ್ಳಬೇಕಾದ ಅನೇಕ ನಿಯಮಗಳನ್ನು ಪಾಲನೆ ಮಾಡುವಂತೆ ಸದ್ದಿಲ್ಲದೆ ಜಾಗೃತಿ ಮೂಡಿಸುತ್ತಿರುವುದು ಪ್ರಶಂಸೆಗೆ ಪಾತ್ರವಾಗಿದೆ.
ಕೊರೊನಾ ಸೋಂಕಿನ ಸಂದರ್ಭದಲ್ಲಿ ಬದುಕಿನಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತಿವೆ. ಅದರಲ್ಲಿಯೂ ಮನೆ ಮದ್ದು ಉಪಯೋಗಿಸುವಂತಹ ವ್ಯವಸ್ಥೆಯತ್ತ ನಾವು ಸಾಗುತ್ತಿದ್ದೇವೆ. ಜಿಪಂ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಅಮೃತಬಳ್ಳಿ ಸಸಿಗಳನ್ನು ಗಣ್ಯರಿಗೆ ನೀಡುವ ಮೂಲಕ ಟೋಕನ್ ರೆಪ್ರೆಸೆಂಟೇಶನ್ ಮಾಡಲಾಗುತ್ತಿರುವುದು ಉತ್ತಮ ಅಂತಾರೆ ತುಮಕೂರು ನಗರ ಶಾಸಕ ಜ್ಯೋತಿ ಗಣೇಶ್.