ತುಮಕೂರು: ಸ್ವಾತಂತ್ರ್ಯಪೂರ್ವದಿಂದಲೂ ಅಸ್ಪೃಶ್ಯತೆ ನಿವಾರಣೆಗೆ ಮಹಾತ್ಮ ಗಾಂಧೀಜಿ, ಅಂಬೇಡ್ಕರ್ ಸೇರಿದಂತೆ ಹಲವರು ನಿರಂತರ ಹೋರಾಟ ಮಾಡಿದ್ದಾರೆ. ಆದರೆ, ಇಂದಿಗೂ ಕೂಡ ಅದು ಚಾಲ್ತಿಯಲ್ಲಿದ್ದು, ನಿವಾರಣೆ ಮಾಡುವುದು ಸಂತರಿಂದ ಮಾತ್ರ ಸಾಧ್ಯ ಎಂದು ಮುರುಘಾ ಮಠದ ಶಿವಮೂರ್ತಿ ಶರಣರು ಹೇಳಿದರು.
ಇತ್ತೀಚೆಗೆ ಸಂಸದ ನಾರಾಯಣಸ್ವಾಮಿ ಪ್ರವೇಶಕ್ಕೆ ವಿರೋಧ ವ್ಯಕ್ತವಾಗಿದ್ದ ಜಿಲ್ಲೆಯ ಪಾವಗಡ ತಾಲೂಕಿನ ಹಳ್ಳಿ ಗೊಲ್ಲರಟ್ಟಿ ಗ್ರಾಮಕ್ಕೆ ಇಂದು ಚಿತ್ರದುರ್ಗದ ಮುರುಘಾಮಠದ ಸ್ವಾಮೀಜಿ ಭೇಟಿ ನೀಡಿದ್ದರು. ಗ್ರಾಮದಲ್ಲಿ ನಡೆದ 'ಸಾಮರಸ್ಯದ ಕಡೆಗೆ ಮುರುಘಾ ಶರಣರ ನಡಿಗೆ' ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿದ್ದರು.
ಗ್ರಾಮದ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ವೇಳೆ ಮಾತನಾಡಿದ ಮುರುಘಾ ಶ್ರೀಗಳು, ಅನೇಕ ಸಲ ಸಾಮರಸ್ಯ ಬೆಳೆಸುವ ಮತ್ತು ಬಾಂಧವ್ಯವನ್ನು ಗಟ್ಟಿಗೊಳಿಸುವ ಕಾರ್ಯಕ್ರಮಗಳಲ್ಲಿ ನಿರಂತರವಾಗಿ ಭಾಗವಹಿಸಿದ್ದೇವೆ. ಅದೇ ರೀತಿ ಇತ್ತೀಚೆಗೆ ಗೊಲ್ಲರಹಟ್ಟಿಗೆ ಸಂಸದ ನಾರಾಯಣಸ್ವಾಮಿಯವರ ಪ್ರವೇಶ ನಿರಾಕರಿಸಿದ್ದನ್ನು ಗಮನಿಸಿ ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದೇವೆ ಎಂದರು.
ಸಮಾಜದಲ್ಲಿ ಜಾತಿಗಳು ಎಷ್ಟು ಮುಖ್ಯವೋ, ಅದೇ ರೀತಿ ಸಾಮರಸ್ಯವೂ ಕೂಡ ಮುಖ್ಯವಾಗಿದೆ. ಪರಸ್ಪರ ಪ್ರೀತಿಯನ್ನು ಬೆಸೆಯುವ ಒಂದು ಭೇಟಿ ಇದಾಗಿದೆ ಅಂತಾ ಶ್ರೀಗಳು ಹೇಳಿದರು.