ತುಮಕೂರು: ಜಿಲ್ಲೆಯಲ್ಲಿ ಇಂದು ಮಹಿಳೆಯೋರ್ವಳಿಗೆ ಕೊರೊನಾ ಸೋಂಕು ದೃಢ ಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 31ಕ್ಕೆ ಏರಿಕೆಯಾಗಿದೆ.
ಸೋಂಕಿತ ಮಹಿಳೆ ಪಿ-2922 65 ವರ್ಷದವರಾಗಿದ್ದಾರೆ. ಜ್ವರದ ಹಿನ್ನೆಲೆಯಲ್ಲಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದ ಇವರ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ವರದಿಯಲ್ಲಿ ಪಾಸಿಟಿವ್ ಎಂದು ದೃಢವಾಗಿದೆ. ಸೋಂಕಿತ ಮಹಿಳೆಗೆ ಏಳು ಮಂದಿ ಪ್ರಾಥಮಿಕ ಸಂಪರ್ಕಿತರು ಹಾಗೂ 15 ಮಂದಿ ದ್ವಿತೀಯ ಸಂಪರ್ಕಿತರಿದ್ದಾರೆ ಎಂದು ತಿಳಿದು ಬಂದಿದೆ. ರೋಗಿ ವಾಸವಿದ್ದ ಮರಳೂರು ದಿಣ್ಣೆ ಮೊದಲ ಕ್ರಾಸ್ ಅನ್ನು ಕಂಟೇನ್ಮೆಂಟ್ ಝೋನ್ ಎಂದು ಘೋಷಿಸಲಾಗಿದೆ.
ಇನ್ನು ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ತಡೆಗಟ್ಟುವ ಹಿನ್ನೆಲೆಯಲ್ಲಿ 2,131 ಮಂದಿಯನ್ನು ಕ್ವಾರಂಟೈನ್ನಲ್ಲಿ ಇಡಲಾಗಿದೆ. 47 ಮಂದಿಯನ್ನು ಜಿಲ್ಲಾ ಆಸ್ಪತ್ರೆಯಲ್ಲಿ ಐಸೋಲೋಷನ್ನಲ್ಲಿ ಇರಿಸಲಾಗಿದ್ದು, ಇದುವರೆಗೆ ಜಿಲ್ಲೆಯಾದ್ಯಂತ 9,718 ಜನರ ಸ್ಯಾಂಪಲ್ಗಳನ್ನು ಪಡೆಯಲಾಗಿದೆ. ಆ ಪೈಕಿ 8,849 ಮಂದಿಯ ವರದಿ ನೆಗೆಟಿವ್ ಬಂದಿದ್ದು, 731 ಮಂದಿಯ ಸ್ಯಾಂಪಲ್ಗಳ ವರದಿ ಬರಬೇಕಿದೆ. 107 ಜನರ ಸ್ಯಾಂಪಲ್ ವರದಿ ತಿರಸ್ಕೃತಗೊಂಡಿದ್ದು, ಪುನಃ ಪರೀಕ್ಷೆಗೆ ಕಳುಹಿಸಲಾಗಿದೆ.
ಇದುವರೆಗೆ ಜಿಲ್ಲೆಯಲ್ಲಿ 31 ಮಂದಿಯಲ್ಲಿ ಕೋವಿಡ್-19 ಸೋಂಕು ದೃಢ ಪಟ್ಟಿದ್ದು, ಇಬ್ಬರು ಮೃತಪಟ್ಟಿದ್ದಾರೆ. 13 ವರ್ಷದ ಬಾಲಕ ಸೇರಿ 6 ಜನ ಗುಣಮುಖರಾಗಿದ್ದು, 23 ಮಂದಿಗೆ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.