ತುಮಕೂರು: ನಿನ್ನೆ ವಿಧಿವಶರಾದ ನಟ ಅರ್ಜುನ್ ಸರ್ಜಾ ಅವರ ತಾಯಿ ಲಕ್ಷ್ಮೀ ದೇವಮ್ಮ ಅವರ ಅಂತ್ಯಸಂಸ್ಕಾರಕ್ಕೆ ಜಿಲ್ಲೆಯ ಮಧುಗಿರಿ ತಾಲೂಕಿನ ಸ್ವಗ್ರಾಮ ಜಕ್ಕೇನಹಳ್ಳಿಯಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಬೆಂಗಳೂರಿನಿಂದ ಜಕ್ಕೇನಹಳ್ಳಿ ಗ್ರಾಮಕ್ಕೆ ತಂದ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ದಿವಂಗತ ನಟ ಶಕ್ತಿಪ್ರಸಾದ್ ಮತ್ತು ಹಿರಿಯ ಮಗನಾದ ಕಿಶೋರ್ ಸರ್ಜಾ ಸಮಾಧಿ ಪಕ್ಕದಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜಕ್ಕೇನಹಳ್ಳಿಯಲ್ಲಿರುವ ಕುಟುಂಬಸ್ಥರಿಂದ ಅಂತ್ಯಸಂಸ್ಕಾರಕ್ಕೆ ತಯಾರಿ ನಡೆದಿದೆ.
ಜಕ್ಕೇನಹಳ್ಳಿಗೆ ಅಹೋಬಲ ಲಕ್ಷ್ಮಿ ನರಸಿಂಹಸ್ವಾಮಿ ದೇವಸ್ಥಾನದ ಬೀದಿ ಮೂಲಕ ಲಕ್ಷ್ಮೀದೇವಮ್ಮ ಅವರ ಪಾರ್ಥಿವ ಶರೀರವನ್ನು ತರಲಾಯಿತು. ಇದರ ಜತೆ ನಟ ಅರ್ಜುನ್ ಸರ್ಜಾ, ಧೃವ ಸರ್ಜಾ ಸೇರಿ ಇಡೀ ಕುಟುಂಬಸ್ಥರು ಭಾಗಿಯಾಗಿದ್ದಾರೆ. ಜಕ್ಕೇನಹಳ್ಳಿಯ ತೋಟದಮನೆಯಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.
1987ರಲ್ಲಿ ದೊಡ್ಡೇರಿ ಜಿಲ್ಲಾ ಪಂಚಾಯ್ತಿ ಸದಸ್ಯರಾಗಿದ್ದ ಲಕ್ಷ್ಮಿದೇವಮ್ಮ ಸ್ಥಳೀಯವಾಗಿ ರಾಜಕೀಯದಲ್ಲೂ ಗುರುತಿಸಿಕೊಂಡಿದ್ದರು. ಲಕ್ಷ್ಮಿ ನರಸಿಂಹಸ್ವಾಮಿ ದೇವಸ್ಥಾನದ ಆಡಳಿತ ಮಂಡಳಿಯ ಮುಖ್ಯಸ್ಥೆಯೂ ಆಗಿದ್ದರು. ಈ ವೇಳೆ ದೇವಾಲಯದ ಅಭಿವೃದ್ಧಿಗೆ ನೆರವು ನೀಡಿದ್ದರು ಎಂದು ತಿಳಿದುಬಂದಿದೆ.
ಓದಿ: ಕೊಪ್ಪಳ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳಿಗೆ ಧೈರ್ಯ ತುಂಬಿದ ಸಚಿವ ಆಚಾರ್