ತುಮಕೂರು : ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ವಿವಿಧ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್‌ನ ಯಶಸ್ವಿಗೊಳಿಸುವ ಉದ್ದೇಶದಿಂದ ಸರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಆನಂದ ಪಟೇಲ್ ತಿಳಿಸಿದ್ದಾರೆ.
ರಾಜ್ಯ ರೈತ ಸಂಘ, ಹಸಿರು ಸೇನೆ, ವಿವಿಧ ಕಾರ್ಮಿಕ ಸಂಘಟನೆಗಳು, ಬೀದಿಬದಿ ವ್ಯಾಪಾರಿಗಳು, ಆಟೋ ಚಾಲಕರ ಸಂಘ, ಹೋಟೆಲ್ ಮಾಲೀಕರ ಸಂಘ, ದಲಿತ ಪರ ಸಂಘಟನೆಗಳು, ಕನ್ನಡಪರ ಸಂಘಟನೆಗಳು ಬಂದ್ ಯಶಸ್ವಿಗೊಳಿಸಲು ಮುಂದೆ ಬಂದಿವೆ. ಜಿಲ್ಲೆಯ 10 ತಾಲೂಕುಗಳಲ್ಲಿಯೂ ಸಂಪೂರ್ಣ ಬಂದ್ ಮಾಡಲು ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಮುಂದಾಗಬೇಕೆಂದು ಕರೆ ನೀಡಿದರು.
ನಗರದ ಟೌನ್‌ಹಾಲ್ ಬಳಿ ಎಲ್ಲಾ ಸಂಘಟನೆಯ ಸದಸ್ಯರು ಒಂದೆಡೆ ಸೇರಿ ಬೈಕ್ ರ್ಯಾಲಿ ನಡೆಸಲಿದ್ದೇವೆ. ನಂತರ ಕ್ಯಾತ್ಸಂದ್ರ ಟೋಲ್‌ಗೇಟ್ ಬಳಿ ತೆರಳಿ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಲಾಗುವುದು. ನಾಳಿನ ಹೋರಾಟವು ಕ್ರಾಂತಿಕಾರಿಯಾಗಿರಲಿದೆ ಎಂದಿದ್ದಾರೆ.