ತುಮಕೂರು / ಪಾವಗಡ : ಲಾಕ್ಡೌನ್ ಇರುವ ಹಿನ್ನೆಲೆಯಲ್ಲಿ ಕಳೆದ ಒಂದು ವಾರದಿಂದ ಮನೆಯಿಂದ ಹೊರ ಬಾರದ ಜನತೆ ಇಂದು ತಾಲೂಕು ಆಡಳಿತದ ವತಿಯಿಂದ ತಾತ್ಕಾಲಿಕವಾಗಿ ತೆರೆದಿದ್ದ ತರಕಾರಿ ಮತ್ತು ದಿನಸಿ ವಸ್ತುಗಳಿಗಾಗಿ ಮುಗಿಬಿದ್ದರು.
ಪಾವಗಡ ಪಟ್ಟಣದ ಹೊಸ ಬಸ್ ನಿಲ್ದಾಣದಲ್ಲಿ ಸುಮಾರು 18 ತಾತ್ಕಾಲಿಕ ತರಕಾರಿ ಅಂಗಡಿಗಳನ್ನು ತೆರೆಯಲಾಗಿತ್ತು, ಕಳೆದ ಎರಡು ವಾರಗಳಿಂದ ತರಕಾರಿ ಮತ್ತು ದಿನಸಿ ಸಾಮಗ್ರಿಗಳಿಲ್ಲದೇ ರೋಸಿದ್ದ ಜನರು ಲಾಕ್ ಡೌನ್ ನಿಯಮವನ್ನು ಮೀರಿ ತರಕಾರಿ ಖರೀದಿಗಾಗಿ ಮುಗಿಬಿದ್ದರು.
ಜನ ಸಂದಣಿ ಹೆಚ್ಚಾಗಿದ್ದನ್ನು ಗಮನಿಸಿದ ಪಟ್ಟಣದ ಪೊಲೀಸರು ಕೂಡಲೇ ಕಾರ್ಯಪ್ರವೃತ್ತರಾಗಿ ಜನ ಸಂದಣಿಯನ್ನು ತೆರವುಗೊಳಿಸಿ ಒಂದು ಮೀಟರ್ ಅಂತರದಲ್ಲಿ ನಿಂತು ತರಕಾರಿ ಮತ್ತು ದಿನಸಿ ವಸ್ತುಗಳ ಖರೀದಿಗೆ ಮುಂದಾಗಿ ಇಲ್ಲವಾದರೆ ಸಂತೆ ತೆರವುಗೊಳಿಸಲಾಗುತ್ತದೆ ಎಂದು ಎಚ್ಚರಿಸಿದರು.