ತುಮಕೂರು: ರೈಲಿನಲ್ಲಿ ಪ್ರಯಾಣಿಸಲು ಕುಳಿತಿದ್ದ ವಿದ್ಯಾರ್ಥಿಯೊಬ್ಬನಿಂದ ತುರ್ತು ಕರೆ ಮಾಡುವ ಉದ್ದೇಶದಿಂದ ಮೊಬೈಲ್ ಅನ್ನು ಪಡೆದ ದುಷ್ಕರ್ಮಿಯೊಬ್ಬ ವಿದ್ಯಾರ್ಥಿಯ ಬ್ಯಾಂಕ್ ಖಾತೆಯಿಂದ 14,000 ರೂ ಲಪಟಾಯಿಸಿರುವ ಘಟನೆ ತುಮಕೂರು ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.
ಸುಪ್ರೀತ್ ಎಂಬ ಇಂಜಿನಿಯರಿಂಗ್ ಓದುತ್ತಿರುವ ವಿದ್ಯಾರ್ಥಿ ತುಮಕೂರು ರೈಲ್ವೆ ನಿಲ್ದಾಣದಿಂದ ಬೆಂಗಳೂರಿಗೆ ತೆರಳಲು ರೈಲು ಏರಿದ್ದಾನೆ. ಈ ಸಂದರ್ಭದಲ್ಲಿ ಪಕ್ಕದಲ್ಲಿ ಬಂದು ಕುಳಿತಿದ್ದ ವ್ಯಕ್ತಿಯೊಬ್ಬ ಬೆಂಗಳೂರಿನಲ್ಲಿ ನಾನು ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದೇನೆ. ನನ್ನ ಮೊಬೈಲ್ ಹಾಳಾಗಿದೆ, ನನ್ನ ಪತ್ನಿಗೆ ತುರ್ತು ಕರೆ ಮಾಡಬೇಕಾಗಿದೆ ಮೊಬೈಲ್ ಕೊಡಿ ಎಂದು ವಿದ್ಯಾರ್ಥಿಯನ್ನು ಪುಸಲಾಯಿಸಿದ್ದಾನೆ.
ಅಮಾಯಕ ವಿದ್ಯಾರ್ಥಿ ಮೊಬೈಲ್ ಅನ್ನು ಕೊಡುತ್ತಿದ್ದಂತೆ ವೈಯಕ್ತಿಕ ವಿಷಯ ಇರುವುದರಿಂದ ರೈಲಿನ ಬಾಗಿಲಿನ ಬಳಿ ಹೋಗಿ ಮಾತನಾಡುತ್ತೇನೆ ಎಂದು ತಿಳಿಸಿದ್ದಾನೆ. ರೈಲಿನ ಬಾಗಿಲ ಬಳಿ ತೆರಳಿ ವಿದ್ಯಾರ್ಥಿಯ ಮೊಬೈಲ್ ನಿಂದ ಸಿಮ್ ಅನ್ನು ತೆಗೆದು ಅದಕ್ಕೆ ಡಮ್ಮಿ ಸಿಮ್ ಹಾಕಿದ್ದಾನೆ. ನಂತರ ವಿದ್ಯಾರ್ಥಿ ಮೊಬೈಲ್ನಲ್ಲಿ ಸಿಮ್ ತೆಗೆದುಕೊಂಡು ತನ್ನ ಮೊಬೈಲ್ಗೆ ಹಾಕಿಕೊಂಡು ವಿದ್ಯಾರ್ಥಿಯ ಬ್ಯಾಂಕ್ ಖಾತೆಗೆ ಕನ್ನ ಹಾಕಿದ್ದಾನೆ.
ಪೊಲೀಸ್ ಠಾಣೆಗೆ ದೂರು: ಕ್ಷಣಾರ್ಧದಲ್ಲಿ 14 ಸಾವಿರ ರೂ ಡ್ರಾ ಮಾಡಿಕೊಂಡಿದ್ದಾನೆ. ನಂತರ ವಾಪಸ್ ಬಂದು ವಿದ್ಯಾರ್ಥಿಗೆ ಆತನ ಮೊಬೈಲ್ ಕೊಟ್ಟು ರೈಲ್ವೆ ನಿಲ್ದಾಣದಲ್ಲಿ ಕಣ್ಮರೆಯಾಗಿದ್ದಾನೆ. ವಿದ್ಯಾರ್ಥಿಯು ತನ್ನ ಮೊಬೈಲ್ನಿಂದ ಬೇರೊಬ್ಬರಿಗೆ ಕರೆ ಮಾಡಲು ಯತ್ನಿಸಿದಾಗ ಅವನಿಗೆ ಸಾಧ್ಯವಾಗಿಲ್ಲ. ಅಲ್ಲದೆ ಸಿಮ್ ಬೇರೆ ಹಾಕಿರುವುದು ಗೊತ್ತಾಗಿದೆ. ತಕ್ಷಣ ಬ್ಯಾಂಕಿಗೆ ದೂರವಾಣಿ ಕರೆ ಮಾಡಿ ಬ್ಯಾಂಕ್ ಅಕೌಂಟ್ ಅನ್ನು ಲಾಕ್ ಮಾಡಿಸಿದ್ದಾನೆ. ಅಲ್ಲದೆ, ವಕೀಲ ಸದಾನಂದ ಅವರ ಮೂಲಕ ಸೈಬರ್ ಅಪರಾಧ ತನಿಖಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.
ಓದಿ: ನವರಾತ್ರಿಯ ದೀಪ ತರುತ್ತಿದ್ದ ಯುವಕನಿಗೆ ವಾಹನ ಡಿಕ್ಕಿ.. ಸ್ಥಳದಲ್ಲಿಯೇ ಸಾವು