ತುಮಕೂರು/ಮೈಸೂರು/ಬೆಂಗಳೂರು: ಎಸಿಬಿ ಅಧಿಕಾರಿಗಳು ರಾಜ್ಯದ ವಿವಿಧೆಡೆ ಸರ್ಕಾರಿ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿದ್ದು, ಈ ವೇಳೆ ಅಪಾರ ಪ್ರಮಾಣದ ಹಣ ಹಾಗೂ ಕೆಜಿಗಟ್ಟಲೆ ಚಿನ್ನಾಭರಣ ಪತ್ತೆಯಾಗಿದೆ. ತುಮಕೂರು, ರಾಮನಗರ ಹಾಗೂ ಮೈಸೂರಿನಲ್ಲಿ ದಾಳಿ ನಡೆದಿದೆ.
ಇಂದು ಬೆಳಗ್ಗೆ ಸರ್ಕಾರಿ ಹುದ್ದೆಯಲ್ಲಿರುವ ಎಂಎಸ್ಎನ್ ಬಾಬು ಹಾಗೂ ನಾಗರಾಜ್ ನಿವಾಸಗಳ ಮೇಲೆ ದಾಳಿ ನಡೆದಿದೆ. ಎಂಎಸ್ಎನ್ ಬಾಬು ಬಿಡಿಎನಲ್ಲಿ ಕರ್ತವ್ಯ ನಿರ್ವಹಿಸಿ ವರ್ಗಾವಣೆಯಾಗಿದ್ದಾರೆ. ನಾಗರಾಜ್ ಮೈಸೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ತುಮಕೂರು ನಗರದ ಮಾರುತಿ ನಗರ ಬಡಾವಣೆಯಲ್ಲಿರುವ ಸರ್ಕಾರಿ ಅಧಿಕಾರಿ ಎಂ.ಎಸ್. ನಿರಂಜನ್ ಬಾಬು ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಸಾಕಷ್ಟು ದಾಖಲೆ ಪತ್ರಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಅಮೃತ ವರ್ಷಿಣಿ ಹೆಸರಿನ ಮನೆ ಮೇಲೆ ದಾಳಿ ಮಾಡಿ ಕಂಪ್ಯೂಟರ್, ಪ್ರಿಂಟರ್, ದಾಖಲಾತಿ ಪತ್ರಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಬೆಂಗಳೂರಿನಲ್ಲಿರುವ ಇವರ ಫ್ಲಾಟ್ ಮೇಲೂ ಅಧಿಕಾರಿಗಳು ತಲಾಷ್ ನಡೆಸಿದ್ದಾರೆ.
ದಾಳಿ ವೇಳೆ ಇವರ ಮನೆಯಲ್ಲಿ 1.5 ಕೆಜಿ ಚಿನ್ನ ಪತ್ತೆಯಾಗಿದ್ದು, ಇದರ ಜೊತೆಗೆ ಐದು ಲಕ್ಷ ನಗದು ಸಹ ಪತ್ತೆಯಾಗಿದೆ. ಅಧಿಕಾರಿಗಳು ಪತ್ತೆಯಾದ ಚಿನ್ನಾಭರಣ ಮೂಲದ ವಿಚಾರಣೆ ನಡೆಸಿದ್ದಾರೆ. ಅಲ್ಲದೆ ಮನೆಯಲ್ಲಿ ಪತ್ತೆಯಾದ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.
ಇದೇ ವೇಳೆ ಹೆಚ್. ನಾಗರಾಜ್ ಅವರ ಮೈಸೂರು ನಗರದ ನಿವಾಸದ ಮನೆ ಮತ್ತು ಭಾಮೈದುನನ ಮನೆ, ರಾಮನಗರ ಜಿಲ್ಲೆ ಮಾಗಡಿಯ ಸಹೋದರನ ಮನೆ ಹಾಗೂ ಮೈಸೂರು ಮಹಾನಗರ ಪಾಲಿಕೆ ಕಚೇರಿ ಮೇಲೂ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಇವರ ಮನೆಯಲ್ಲೂ ಕೆಜಿಗಟ್ಟಲೆ ಚಿನ್ನಾಭರಣ ಹಾಗೂ ಲಕ್ಷ ಲಕ್ಷ ಹಣ ಪತ್ತೆಯಾಗಿದೆ. 9 ಲಕ್ಷ ರೂ. ನಗದು ಹಾಗೂ 1.3 ಕೆ.ಜಿ ಚಿನ್ನ ಪತ್ತೆಯಾಗಿದ್ದು, ಈ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.