ತುಮಕೂರು: ಕೈಲಾಸಾಶ್ರಮದ ಸದ್ಗುರು ಶ್ರೀ ಆದಿದೇವಾನಂದಗಿರಿ ಮಹಾ ಸ್ವಾಮೀಜಿ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಕಾರಣ ನಿನ್ನೆ ರಾತ್ರಿ ಬ್ರಹ್ಮಲೀನರಾಗಿದ್ದಾರೆ.
ಮಹಾ ಸ್ವಾಮೀಜಿಗಳು ಅಪಾರ ಶಿಷ್ಯ ಹಾಗೂ ಭಕ್ತರನ್ನು ಅಗಲಿದ್ದು ಅಧ್ಯಾತ್ಮಲೋಕಕ್ಕೆ ತುಂಬಲಾರದ ನಷ್ಟವನ್ನುಂಟುಮಾಡಿದೆ ಎಂದು ರಾಮೋಹಳ್ಳಿಯ ಶ್ರೀ ಸಿದ್ಧಾರೂಢ ಮಿಷನ್ ಅಧ್ಯಕ್ಷ ಡಾ.ಆರೂಢಭಾರತೀ ಸ್ವಾಮೀಜಿ ಸಂತಾಪ ಸೂಚಿಸಿದ್ದಾರೆ.
ವಿಜಯಪುರ ಜಿಲ್ಲೆ ಸಿಂದಗಿ ತಾಲೂಕು ಚಾಂದಕವಟೆಯ ಶ್ರೀ ಮಲ್ಲಿಕಾರ್ಜುನಪ್ಪ ಮತ್ತು ಶ್ರೀಮತಿ ನಾಗಮ್ಮ ದಂಪತಿಗಳ ಸುಪುತ್ರರಾದ ಇವರ ಪೂರ್ವಾಶ್ರಮದ ಹೆಸರು ವೀರಭದ್ರ. ಬಾಲ್ಯದಲ್ಲಿಯೇ ವೇದಾಂತದ ಬಗ್ಗೆ ಆಸಕ್ತಿ ಹೊಂದಿದ್ದ ಇವರು ಆಗಲೇ ಶಾಂತಾನಂದ ಸ್ವಾಮೀಜಿಗಳಿಂದ ಮಂತ್ರದೀಕ್ಷೆಯನ್ನು ಪಡೆದು ಪಂಚೀಕರಣ, ವಿಚಾರ ಚಂದ್ರೋದಯ, ವಿಚಾರ ಸಾಗರ ಗ್ರಂಥಗಳ ಬಗ್ಗೆ ಅಧ್ಯಯನ ಮಾಡಿದ್ದರು.
ಗದಗಿನ ಶಿವಾನಂದ ಸ್ವಾಮಿಗಳ ಸಂಪ್ರದಾಯಕ್ಕೆ ಸೇರಿದ ಇವರು ಅನೇಕ ಜನ ಶಿಷ್ಯರನ್ನು ಸಿದ್ಧಗೊಳಿಸಿದ್ದು, ಅವರಲ್ಲಿ ಮಾತೃಶ್ರೀ ಅಕ್ಕಮಹಾದೇವಿ ಹಾಗೂ ಮಾತೃಶ್ರೀ ಗಂಗಮ್ಮ ಅವರು ಪ್ರಮುಖರಾಗಿದ್ದಾರೆ. ಇಂದು ಸಂಜೆ ತುಮಕೂರಿನ ಶ್ರೀ ಕೈಲಾಸಾಶ್ರಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.