ತುಮಕೂರು: ಅನಾರೋಗ್ಯದಿಂದ ಬಳಲುತ್ತಿದ್ದ ಪತಿಯನ್ನು ಆರೈಕೆ ಮಾಡಲು ಬೇಸತ್ತ ಪತ್ನಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಕೊರಟಗೆರೆ ತಾಲೂಕಿನ ಸಿ ಎನ್ ದುರ್ಗಾ ಹೋಬಳಿಯ ಜಂಪೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ತಿಪ್ಪೆರಾಜು ಎಂಬ ವ್ಯಕ್ತಿ ಕೊಲೆಯಾದವ. ಸುಮಾರು 6 ತಿಂಗಳ ಹಿಂದೆ ದ್ವಿಚಕ್ರ ವಾಹನದಲ್ಲಿ ಬರುವಾಗ ಅಪಘಾತದಲ್ಲಿ ಕಾಲು ಮುರಿದುಕೊಂಡ ತಿಪ್ಪೆ ರಾಜು ಮನೆಯಲ್ಲಿಯೇ ಇದ್ದ. ತಿಪ್ಪೆರಾಜುಗೆ ಪತ್ನಿ ರತ್ನಮ್ಮ ಆರೈಕೆ ಮಾಡಲಾಗದೇ ಬೇಸರಗೊಂಡು ರಾತ್ರಿ ವೇಳೆ ಮಲಗಿದ್ದ ಸಮಯದಲ್ಲಿ ಹರಿತವಾದ ಚಾಕುವಿನಿಂದ ಗಂಡನ ತಲೆ, ಎದೆ ಹಾಗೂ ಕುತ್ತಿಗೆ ಭಾಗಕ್ಕೆ ಇರಿದು ಕೊಲೆ ಮಾಡಿದ್ದಾಳೆ .
ಮರುದಿನ ಬೆಳಗ್ಗೆ ಗಾಬರಿಗೊಂಡ ಊರಲೆಲ್ಲ ರತ್ನಮ್ಮ ಓಡಾಡುತ್ತಿರುವುದನ್ನು ಗಮನಿಸಿದ ಗ್ರಾಮಸ್ಥರು ಅವರ ಮನೆ ಹತ್ತಿರ ಹೋಗಿ ನೋಡಿದ್ದಾರೆ. ಆಗ ತಿಪ್ಪೆರಾಜು ಮಂಚದ ಪಕ್ಕದಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಆ ವೇಳೆ, ಬೇರೆಡೆಗೆ ಕೆಲಸಕ್ಕೆ ಹೋಗಿದ್ದ ಅವರ ಮಗ ವೇಣುವಿಗೆ ವಿಚಾರ ತಿಳಿಸಿದ್ದಾರೆ.
ಸ್ಥಳಕ್ಕೆ ಮಧುಗಿರಿ ಡಿವೈಎಸ್ಪಿ ರಾಮಕೃಷ್ಣಯ್ಯ ಸಿಪಿಐ ಸಿದ್ಧರಾಮೇಶ್ವರ ಭೇಟಿ ನೀಡಿ ಸ್ಥಳ ಪರಿಶೀಲಿಸಿದ್ದಾರೆ. ಕೊಲೆ ಮಾಡಿರುವ ರತ್ನಮ್ಮನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ: ಮಂದಿರ ಮಸೀದಿಗಳಲ್ಲಿ ಲೌಡ್ ಸ್ಪೀಕರ್ ಬಳಕೆಗೆ ಅನುಮತಿ ಕೋರಿ ಬಂದ್ವು 959 ಅರ್ಜಿಗಳು