ತುಮಕೂರು: ಪತ್ನಿಯ ಶೀಲ ಶಂಕಿಸಿ ಪತಿ ಹಾಗೂ ಮೈದುನ ಸೇರಿಕೊಂಡು ಬರ್ಬರವಾಗಿ ಕೊಲೆ ಮಾಡಿ ಮನೆಯಲ್ಲಿಯೇ ಗುಂಡಿ ತೆಗೆದು ಹೂತು ಹಾಕಿರುವ ಘಟನೆ ಮಧುಗಿರಿ ತಾಲೂಕಿನ ಹೊಸ ಇಟಕಲೋಟಿ ಗ್ರಾಮದಲ್ಲಿ ಜರುಗಿದೆ.
ಗಾಯಿತ್ರಿ(18) ಕೊಲೆಯಾದ ಗೃಹಿಣಿ. ನರಸಿಂಹಮೂರ್ತಿ ಎಂಬಾತ ತನ್ನ ಅಕ್ಕನ ಮಗಳಾದ ಗಾಯಿತ್ರಿಯನ್ನು 9 ತಿಂಗಳ ಹಿಂದಷ್ಟೇ ವಿವಾಹವಾಗಿದ್ದ. ನರಸಿಂಹಮೂರ್ತಿ, ಸತೀಶ ಹಾಗೂ ಮಂಜುನಾಥ್ ಎಂಬುವರು ಸಂಚು ರೂಪಿಸಿ ಡಿಸೆಂಬರ್ 7ರಂದು ಗಾಯಿತ್ರಿಯನ್ನು ಬರ್ಬರವಾಗಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.
ಕೊಲೆ ಮಾಡಿದ ನಂತರ ಶವವನ್ನು ಮನೆಯಲ್ಲಿಯೇ ಗುಂಡಿ ತೆಗೆದು ಹೂತು ಹಾಕಿ ಕಡಪದ ಕಲ್ಲಿನಿಂದ ಮುಚ್ಚಿ ಹಾಕಿದ್ದರು. ಗಾಯಿತ್ರಿ ತಂದೆ ಹನುಮಂತರಾಯಪ್ಪ ಹಲವು ದಿನಗಳಿಂದ ಮಗಳು ಕಾಣಿಸುತ್ತಿಲ್ಲ ಎಂದು ಮನೆಗೆ ಹೋಗಿ ನೋಡಿದಾಗ ಅಲ್ಲಿ ಗುಂಡಿ ಕಾಣಿಸಿದೆ.

ಅನುಮಾನಗೊಂಡ ತಂದೆ ಹನುಮಂತರಾಯಪ್ಪ ಮಿಡಿಗೇಶಿ ಪೊಲೀಸ್ ಠಾಣೆಯಲ್ಲಿ ಮಗಳು ಕಾಣೆಯಾಗಿರುವ ಬಗ್ಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಕೊಲೆಯಾದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ.
ಉಪ ವಿಭಾಗಾಧಿಕಾರಿ ಸೋಮಪ್ಪ ಕಡಕೋಳ, ತಹಶೀಲ್ದಾರ್ ಡಾ. ಜಿ.ವಿಶ್ವನಾಥ್ , ಡಿವೈಎಸ್ಪಿ ಎಂ.ಪ್ರವೀಣ್ , ಸಿಪಿಐ ಎಂ.ಎಸ್.ಸರ್ದಾರ್ ಸಮ್ಮುಖದಲ್ಲಿ ಮೃತದೇಹವನ್ನು ಹೊರ ತೆಗೆಯಲಾಗಿದೆ. ಮೂವರು ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.