ತುಮಕೂರು: ಕೊರೊನಾದಿಂದ ಮೃತಪಟ್ಟ ಶವಗಳ ಅಂತ್ಯ ಸಂಸ್ಕಾರಕ್ಕೆ ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ. ಅಲ್ಲದೇ ಸ್ವತಃ ಸಂಬಂಧಿಕರೇ ವೈರಸ್ ಭೀತಿಯಿಂದ ಶವದತ್ತ ಸುಳಿಯದ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಕಷ್ಟ-ಕಾರ್ಪಣ್ಯಗಳ ನಡುವೆ ಯಾವುದೇ ಅಂಜಿಕೆ, ಅಳುಕಿಲ್ಲದೇ ಜಿಲ್ಲೆಯ ಮುಸ್ಮಿಂ ಯುವಕರ ಗುಂಪೊಂದು ಸಂಸ್ಕಾರಕ್ಕೆ ಮುಂದಾಗಿ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.
ಜಿಲ್ಲೆ ಮಧುಗಿರಿ ಪಟ್ಟಣದಲ್ಲಿ 8 ಮಂದಿ ಮುಸ್ಮಿಂ ಯುವಕರ ತಂಡವೊಂದು ಕೋವಿಡ್ ಶವಗಳ ಅಂತ್ಯಕ್ರಿಯೆಯಲ್ಲಿ ಸಕ್ರಿಯವಾಗಿದೆ. ಇದುವರೆಗೂ 16ಕ್ಕೂ ಹೆಚ್ಚು ಮೃತ ದೇಹಗಳನ್ನು ಹಿಂದೂ ಧರ್ಮ ವಿಧಿ ವಿಧಾನದಂತೆಯೇ ಅಂತ್ಯಸಂಸ್ಕಾರ ನಡೆಸಿದೆ. ಆಸ್ಪತ್ರೆಯಿಂದ ಕೋವಿಡ್ ಸೋಂಕಿತ ಮೃತದೇಹಗಳನ್ನು ತರುವುದರಿಂದ ಮೊದಲುಗೊಂಡು ಅಂತ್ಯಕ್ರಿಯೆಯ ಸ್ಥಳದವರೆಗೂ ಶವವನ್ನು ತೆಗೆದುಕೊಂಡು ಬರುವ ಜವಾಬ್ದಾರಿ ಈ ತಂಡದ್ದಾಗಿರುತ್ತದೆ.
ಭಾವೈಕ್ಯತೆಯ ಸಂಕೇತ: ಎಲ್ಲರೂ ಪಿಪಿಇ ಕಿಟ್ ಗಳನ್ನು ಧರಿಸಿ ಕೋವಿಡ್ ನಿಯಮಾವಳಿಗಳ ಅನುಸಾರ ಅಂತ್ಯಸಂಸ್ಕಾರಕ್ಕೆ ವ್ಯವಸ್ಥೆ ಮಾಡುತ್ತಾರೆ. ಅಲ್ಲದೇ ಮೃತರ ಸಂಬಂಧಿಕರಿಗೆ ಧೈರ್ಯ ತುಂಬಿ ಅಂತಿಮ ವಿಧಿ ವಿಧಾನಗಳನ್ನು ಪೂರೈಸಲು ವಾತಾವರಣ ನಿರ್ಮಾಣ ಮಾಡುತ್ತಾರೆ. ಇದೊಂದು ರೀತಿಯ ಭಾವೈಕ್ಯತೆಯ ಸಂಕೇತವೆಂಬಂತೆ ಪ್ರತಿಬಿಂಬಿತವಾಗಿದೆ.
ಈ ತಂಡದ ಕಾರ್ಯಕ್ಕೆ ಮಧುಗಿರಿ ತಾಲೂಕು ಆಡಳಿತವೂ ಕೂಡ ಸಾಥ್ ನೀಡುತ್ತಿದ್ದು, ಯುವಕರಿಗೆ ಪಿಪಿಇ ಕಿಟ್ ನೀಡುವಂತೆ ತಾಲೂಕು ವೈದ್ಯಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಮಧುಗಿರಿ ತಹಶೀಲ್ದಾರ್ ವೈ. ರವಿ ತಿಳಿಸಿದ್ದಾರೆ.
ಮುನ್ನೆಚ್ಚರಿಕೆ ಕ್ರಮ ವಹಿಸಿ ಅಂತ್ಯಕ್ರಿಯೆ: ಮಧುಗಿರಿ ತಾಲೂಕು ವ್ಯಾಪ್ತಿಯಲ್ಲದೇ ತುಮಕೂರು, ಕೊರಟಗೆರೆ ತಾಲೂಕಿನಲ್ಲಿಯೂ ಕೋವಿಡ್ ಸೋಂಕಿನಿಂದ ಮೃತಪಟ್ಟವರ ಶವಗಳನ್ನು ಅಂತ್ಯಸಂಸ್ಕಾರ ಮಾಡಲು ಕರೆಯುತ್ತಿದ್ದಾರೆ. ಸೂಕ್ತ ಮುನ್ನೆಚ್ಚರಿಕೆ ಕ್ರಮ ವಹಿಸಿ ಅಂತ್ಯಕ್ರಿಯೆ ನಡಸಲಾಗುತ್ತಿದೆ. ಅಲ್ಲದೇ ಮುಂಜಾಗ್ರತಾ ಕ್ರಮವಾಗಿ ತಾವು ಧರಿಸುವ ಪಿಪಿಇ ಕಿಟ್ ಗಳನ್ನು ಅಂತ್ಯಸಂಸ್ಕಾರದ ಸಮೀಪವೇ ಸುಟ್ಟು ಹಾಕುತ್ತಿದ್ದೇವೆ. ಈ ಮೂಲಕ ಕೋವಿಡ್ ನಿಯಮಾವಳಿಗಳನ್ನು ಚಾಚುತಪ್ಪದೆ ಪಾಲಿಸುತ್ತಿದ್ದೇವೆ ಎನ್ನುತ್ತಾರೆ ತಂಡದ ಸದಸ್ಯ ಜೆ.ಕೆ ಸೈಯದ್ ಕಲಂದರ್.
ಓದಿ: ನಾಳೆ ಸಂಜೆಯಿಂದ ರಾಜ್ಯಾದ್ಯಂತ 14 ದಿನ ಕೋವಿಡ್ ಕರ್ಫ್ಯೂ... ಕಠಿಣ ನಿಯಮ ಜಾರಿ