ತುಮಕೂರು: ಫೋಟೋಗಳನ್ನು ಬಳಸಿ ನಕಲಿ ಫೇಸ್‌ಬುಕ್ ಖಾತೆ ತೆರೆದು ಹಣಕ್ಕಾಗಿ ಬೇಡಿಕೆ ಇಡುವವರ ಸಂಖ್ಯೆ ಹೆಚ್ಚುತ್ತಿದೆ. ಇದೀಗ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಟಿ.ಬಿ.ಜಯಚಂದ್ರ ಅವರ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ ತೆರೆಯಲಾಗಿದ್ದು, ವಂಚಕರು ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ನಂತರ ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂದು ಟಿ.ಬಿ.ಜಯಚಂದ್ರ ಹೇಳಿದ್ದಾರೆ.
ಮಾಜಿ ಕಾನೂನು ಮತ್ತು ಸಂಸದೀಯ ಖಾತೆ ಸಚಿವರಾಗಿರುವ ಟಿ.ಬಿ.ಜಯಚಂದ್ರ ಅವರೇ ಸ್ವತಃ ತಮ್ಮ ಅಧಿಕೃತ ಫೇಸ್‌ಬುಕ್ ಖಾತೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ. ‘ನನ್ನ ಹೆಸರು ಭಾವಚಿತ್ರವಿರುವ ನಕಲಿ ಫೇಸ್‌ಬುಕ್ ಖಾತೆ ತೆರೆಯಲಾಗಿದ್ದು, ಅವರು ಹಣಕ್ಕಾಗಿ ಬೇಡಿಕೆ ಇಡುತ್ತಿರುವುದು ಕಂಡುಬಂದಿದೆ. ದಯವಿಟ್ಟು ಇದನ್ನು ನಿರ್ಲಕ್ಷಿಸಿ’ ಎಂದು ತಮ್ಮ ಅಧಿಕೃತ ಖಾತೆಯಲ್ಲಿ ಮನವಿ ಮಾಡಿದ್ದಾರೆ.
ಅಲ್ಲದೆ ನಕಲಿ ಖಾತೆಯ ಪ್ರೋಪೈಲ್ ಅನ್ನು ಸಹ ಅಪ್‌ಲೋಡ್ ಮಾಡಿ ಎಚ್ಚರದಿಂದ ಇರುವಂತೆ ತಿಳಿಸಿದ್ದಾರೆ. ಅಲ್ಲದೆ ಈ ಸಂಬಂಧ ತುಮಕೂರಿನ ಸೈಬರ್ ಕ್ರೈಂ ಪೊಲೀಸ್ ಠಾಣೆಗೂ ದೂರು ನೀಡಿದ್ದಾರೆ. ಇಂತಹ ಸೈಬರ್ ಕ್ರೈಂಗಳಿಗೆ ಸಂಬಂಧಿಸಿದಂತೆ ತಾವು ಸಚಿವರಾಗಿದ್ದ ಅವಧಿಯಲ್ಲಿ ಕೇಂದ್ರ ಸಚಿವರೊಂದಿಗೆ ಚರ್ಚಿಸಿ ಕ್ರಮ ತೆಗೆದುಕೊಳ್ಳಲು ಮನವಿ ಮಾಡಲಾಗಿತ್ತು. ಅಲ್ಲದೆ ಪ್ರತ್ಯೇಕ ಕಾನೂನು ರೂಪಿಸಲು ಸಲಹೆ ನೀಡಲಾಗಿತ್ತು ಎಂದು ಟಿ.ಬಿ. ಜಯಚಂದ್ರ ತಿಳಿಸಿದ್ದಾರೆ.